ಬೆಳಗಾವಿ ೧೬- ಕವಿಗೆ ಸಾಮಾಜಿಕ ಜವಾಬ್ಧಾರಿ ಇದೆ. ಆ ಜವಾಬ್ಧಾರಿಯನ್ನು ನಿಭಾಯಿಸುವಾಗ ಸಾಹಿತ್ಯದ ಮೂಲಕ ಮತ್ತೊಬ್ಬರ ಮನಸ್ಸನ್ನ ಕೆರಳಿಸಲು, ನೋಯಿಸಲು ಹೋಗಬಾರದು. ಕಾವ್ಯವಿರುವುದು ಮನಸ್ಸನ್ನ ಅರಳಿಸಲು. ಮನಸ್ಸನ್ನು ಅರಳಿಸುವಂಥ ಕೆಲಸವನ್ನು ಇಂದು ಬಿಡುಗಡೆಗೊಂಡ ಶ್ರೀಮತಿ ನಿವೇದಿತಾ ನವಲಗುಂದ ಅವರ ಮುಷ್ಠಿ ಹೃದಯ ಸೃಷ್ಟಿ ಪ್ರೀತಿ ಕೃತಿಯು ಮಾಡಿದೆ ಎಂದು ಹಿರಿಯ ಪತ್ರಕರ್ತ ಎಲ್. ಎಸ್. ಶಾಸ್ತ್ರಿಯವರು ಇಂದಿಲ್ಲಿ ಹೇಳಿದರು.
ನಿವೇದಿತಾರ್ಪಣ ಅಕ್ಯಾಡಮಿ ಆಫ್ ಮ್ಯೂಜಿಕ್ ಆಂಡ್ ಆರ್ಟ್ಸ ಸಂಘಟನೆಯವರು ನಗರದ ತಿಲಕವಾಡಿಯಲ್ಲಿರುವ ವರೇರಕರ ನಾಟ್ಯಗೃಹ ಸಭಾಭವನದಲ್ಲಿ ಇದೇ ದಿ. ೧೪ ರವಿವಾರದಂದು ಪುಸ್ತಕ ಬಿಡುಗಡೆ ಮತ್ತು ಅಕಾಡಮಿ ವಾರ್ಷಿಕೋತ್ಸವ ಕಾರ್‍ಯಕ್ರಮವನ್ನು ಹಮ್ಮಿಕೊಂಡಿದ್ದರು. ಚಂದ್ರಶೇಖರ ನವಲಗುಂದ ಸಂಪಾದಿಸಿರುವ ದಿ. ನಿವೇದಿತಾ ಚಂದ್ರಶೇಖರ ರಚನೆಯ ಮುಷ್ಠಿ ಹೃದಯ ಸೃಷ್ಟಿ ಪ್ರೀತಿ ಕವನ ಸಂಕಲನವು ಬಿಡುಗಡೆ ಸಮಾರಂಭವು ಜರುಗಿತು. ಕಾರ್‍ಯಕ್ರಮವನ್ನು ಉದ್ಘಾಟಿಸಿದ ಶಾಸ್ತ್ರಿಯವರು ಮೇಲಿನಂತೆ ಅಭಿಪ್ರಾಯ ಪಟ್ಟರು
ಮುಂದೆ ಮಾತನಾಡುತ್ತ ಶಾಸ್ತ್ರಿಯವರು ಪ್ರೀತಿಯನ್ನುವುದು ಕವಿಯ ಹೃದಯದಲ್ಲಿರುವ ಅಮೃತ ಕಳಸ. ಆ ಅಮೃತ ಕಳಸದಿಂದ ಜನತೆಗೆ, ಸಮಾಜಕ್ಕೆ ಒಳ್ಳೆಯದನ್ನು ಕೊಡುವುದೇ ಕವಿಯ ಕೆಲಸ, ಕರ್ತವ್ಯ ಕೂಡ ಎಂದು ಹೇಳಿದರು.
ಕೃತಿ ಪರಿಚಯ ಮಾಡಿದ ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಮಾತನಾಡುತ್ತ ಕಾವ್ಯಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಕವಿಗಳಿಗೆ ನಿವೇದಿತಾರವರ ಮುಷ್ಠಿ ಹೃದಯ ಸೃಷ್ಟಿ ಪ್ರೀತಿ ಕೃತಿಯು ಒಂದು ಮಾದರಿಯಾಗಿದೆ. ಇಲ್ಲಿ ಬಂದಿರುವ ಎಲ್ಲ ಕವನ, ಹನಿಗವನಗಳು ತುಂಬ ನೈಜವಾಗಿ ಮೂಡಿಬಂದಿವೆ ಇದೊಂದು ಸಂಗ್ರಾಹ್ಯಯೋಗ್ಯವಾದ ಕೃತಿ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೊಪ್ಪಳದ ಡಾ. ಕೆ.ಜಿ. ಕುಲಕರ್ಣಿ, ಅತಿಥಿಗಳಾಗಿ ಆಗಮಿಸಿದ್ದ ಧಾರವಾಡದ ಡಾ. ಅಮೃತ ಯಾರ್ದಿ, ಅತಿಥಿಗಳಾಗಿ ಆಗಮಿಸಿದ್ದ ಹಾಸ್ಯಕೂಟ ಸಂಚಾಲಕರಾದ ಗುಂಡೇನಟ್ಟಿ ಮಧುಕರ, ಸಂಗೀತ ಕಲಾವಿದರಾದ ಪ್ರಭಾಕರ ಶಹಾಪುರಕರ, ಮಾತನಾಡಿದರು.
ಚಂದ್ರಶೇಖರ ನವಲಗುಂದ ಸ್ವಾಗತಿಸಿದರು. ಅಕಾಡಮಿ ವಾರ್ಷಿಕ ವರದಿಯನ್ನು ಚಿದಂಬರ ನವಲಗುಂದ ಮಂಡಿಸಿದರು. ನಿರಂಜನ ನವಲಗುಂದ ವಂದಿಸಿದರು. ನಿವೇದಿತಾರ್ಪಣ ಅಕಾಡಮಿಯ ವಿದ್ಯಾರ್ಥಿಗಳು ಹಾಡುಗಳನ್ನು ಮತ್ತು ಕೇದಾರ ಪೊದ್ದಾರ್ ಗಿಟಾರ ವಾದನವನ್ನು ಪ್ರಸ್ತುತ ಪಡಿಸಿದರು. ಶ್ರೀಮತಿ ಅಶ್ವಿನಿ ಜೋಶಿ ನಿರೂಪಿಸಿದರು.
ಕವಿಯಾದವನು ಮನಸ್ಸನ್ನು ಅರಳಿಸಬೇಕು, ಕೆರಳಿಸಬಾರದು : ಶಾಸ್ತ್ರಿ


