ಬೆಂಗಳೂರು,18: ಲೈಂಗಿಕ ಕಿರುಕುಳ ಅರೋಪ, ಕಾನೂನು ಹೋರಾಟದ ಒತ್ತಡಗಳ ನಡುವಲ್ಲೂ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅವರು ವಿಧಾನ ಸೌಧದಲ್ಲಿ ಶುಕ್ರವಾರ ನಡೆದ ಕಾಗದ ಪತ್ರ ಸಮಿತಿ ಸಭೆಯಲ್ಲಿ ಭಾಗವಹಿಸಿದರು.
ರೇವಣ್ಣ ಅವರು ಈ ಸಮಿತಿಯ ಅಧ್ಯಕ್ಷ ಕೂಡ ಆಗಿದ್ದು, ಕೋರ್ಟ್ ಗೆ ತೆರಳುವ ಮುನ್ನ ಸಭೆಯಲ್ಲಿ ಭಾಗಿಯಾಗಿದ್ದರು. ಬರಿಗಾಲಿನಲ್ಲಿ ಬಂದ ರೇವಣ್ಣ ಅವರು, ಸಭೆ ನಡೆಸಿದರು. ಸಮಿತಿಯಲ್ಲಿರುವ 20 ಸದಸ್ಯರ ಪೈಕಿ 10ರಿಂದ 11 ಶಾಸಕರು ಸಭೆಗೆ ಆಗಮಿಸಿದ್ದರು. ಹೆಚ್ಚಿನ ಅಧಿಕಾರಿಗಳು ಚುನಾವಣಾ ಕರ್ತವ್ಯದಿಂದ ಹಿಂತಿರುಗದ ಕಾರಣ ಮುಂದಿನ ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಲು ನಿರ್ಧರಿಸಿದರು ಎಂದು ತಿಳಿದುಬಂದಿದ.
ಸಭೆ ಬಳಿಕ ಹೊರ ಬಂದ ರೇವಣ್ಣ ಅವರು, ತಮ್ಮನ್ನು ಸುತ್ತುವರಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಲಿಲ್ಲ. ಸಮಿತಿಯ ಅಧ್ಯಕ್ಷರನ್ನು ಬದಲಿಸುವ ಕುರಿತು ಗುಸುಗುಸುಗಳು ಕೇಳಿ ಬರುತ್ತಿವೆ ಈ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೂ ಉತ್ತರಿಸಲು ನಿರಾಕರಿಸಿದರು. ದಾರಿ ಬಿಡಿ, ನಾನು ಕೋರ್ಟ್ ಹೋಗಬೇಕಿದೆ ಎಂದು ಹೇಳಿದರು. ನಂತರ ರೇವಣ್ಣ ಸ್ಥಿತಿಯನ್ನು ಅರ್ಥ ಮಾಡಿಕೊಂಡ ಪತ್ರಕರ್ತರು ಅವರಿಗೆ ಹೋಗಲು ದಾರಿ ಬಿಟ್ಟರು.
ಜೈಲಿಗೆ ಹೋಗಿ ಬಂದಾಗಿನಿಂದ ರೇವಣ್ಣ ಚಪ್ಪಲಿ ಧರಿಸುವುದನ್ನು ನಿಲ್ಲಿಸಿದ್ದಾರೆ. ದೈವಭಕ್ತರಾಗಿರುವ ಅವರು, ಅರೋಪಗಳಿಂದ ಮುಕ್ತರಾಗುವವರೆಗೆ ಚಪ್ಪಲಿ ಧರಿಸದಿರುವ ಪಣ ತೊಟ್ಟಿದ್ದಾರೆಂದು ಹೇಳಲಾಗುತ್ತಿದೆ.