ಮಂಡ್ಯ, ಏಪ್ರಿಲ್ 10: ಜಿಲ್ಲೆಯ ಕೆರೆಗೋಡು ಗ್ರಾಮದ 108 ಅಡಿ ಎತ್ತರದ ಕಂಬದ ಮೇಲೆ ಹನುಮ ಧ್ವಜ ಹಾರಿಸಲಾಗಿತ್ತು. ಬಳಿಕ ಆ ಧ್ವಜವನ್ನು ಕೆಳಗಿಳಿಸಿ ರಾಷ್ಟ್ರಧ್ವಜ ಹಾರಿಸುತ್ತಿದ್ದಂತೆ ಅಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹಿಂದೂ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟಿಸಿದ್ದವು. ಲಾಠಿಚಾರ್ಜ್ ಕೂಡ ನಡೆದಿತ್ತು. ಇದೀಗ ಕೆರಗೋಡು ಹನುಮ ಧ್ವಜ ದಂಗಲ್ ಮತ್ತೆ ಮುನ್ನೆಲೆಗೆ ಬಂದಿದೆ. ಅರ್ಜುನ ಸ್ಥಂಭದಲ್ಲಿ ಹನುಮ ಧ್ವಜ ಹಾರಿಸಲು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದು, ಮತ್ತೊಂದು ಹೋರಾಟಕ್ಕೆ ಮುಂದಾಗಿವೆ.
ಏಪ್ರಿಲ್ 12ರಂದು ಮಂಡ್ಯದಲ್ಲಿ ಕರಾವಳಿ ಮತ್ತು ಮಲೆನಾಡು ಮಾದರಿಯಂತೆ ಇತಿಹಾಸದಲ್ಲೇ ಮೊದಲ ಬಾರಿಗೆ ನಗರದಲ್ಲಿ ಬೃಹತ್ ಶೋಭಯಾತ್ರೆಗೆ ನಿರ್ಧರಿಸಲಾಗಿದೆ. ವಿಹೆಚ್ಪಿ, ಬಜರಂಗದಳ ಹಾಗೂ ಶ್ರೀರಾಮಾಂಜನೇಯ ಮಹೋತ್ಸವ ಸಮಿತಿಯಿಂದ ಈ ಯಾತ್ರೆ ಆಯೋಜನೆ ಮಾಡಲಾಗುತ್ತಿದ್ದು, ಶೋಭಾಯಾತ್ರೆಯಲ್ಲಿ ಟಿಪ್ಪು ಕೊಂದ ಉರಿಗೌಡ ಮತ್ತು ನಂಜೇಗೌಡ ನೆನಪಿಸಲು ಯೋಜನೆ ರೂಪಿಸಲಾಗಿದೆ.
ಹಿಂದೂಗಳ ಜಾಗೃತಿಗಾಗಿ ಶೋಭಾಯಾತ್ರೆ ಆಯೋಜನೆ ಮಾಡಲಾಗುತ್ತಿದ್ದು, ಡಿಜೆ ಹಾಗೂ ಕಲಾತಂಡಗಳು ಸೇರಿದಂತೆ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಮಂಡ್ಯದ ಶಕ್ತಿ ದೇವತೆ ಕಾಳಿಕಾಂಭ ದೇವಸ್ಥಾನದಿಂದ ಬೃಹತ್ ಮೆರವಣಿಗೆ ನಡೆಯಲಿದೆ. ಬಳಿಕ ಮಂಡ್ಯ ವಿಶ್ವವಿದ್ಯಾನಿಲಯ ಆವರಣದಲ್ಲಿ ಉರೀಗೌಡ ಮತ್ತು ನಂಜೇಗೌಡ ಹೆಸರಿನಲ್ಲಿ ವೇದಿಕೆ ನಿರ್ಮಾಣವಾಗಲಿದೆ. ಆ ಮೂಲಕ ಟಿಪ್ಪು ಕೊಂದವರೂ ನಮ್ಮ ಹಿಂದೂಗಳು ಎಂದು ಸಾರಲು ನಿರ್ಧರಿಸಲಾಗಿದೆ.
ಇನ್ನು ಈ ಶೋಭಾಯಾತ್ರೆಗೆ ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದ ನಂದನಾಥ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹಾಗೂ ಶಾಸಕರುಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.