ಇಸ್ರೇಲ್,ಏಪ್ರಿಲ್ 11: ಇಸ್ರೇಲ್ ವಾಯುಪಡೆ ಬುಧವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್ ರಾಜಕೀಯ ಮುಖಂಡ ಇಸ್ಮಾಯಿಲ್ ಹನಿಯೆಹ್ ಅವರ ಮೂವರು ಪುತ್ರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಮಾಹಿತಿ ನೀಡಿದೆ.
ಹಮಾಸ್ ನಾಯಕನ ಮೂವರು ಪುತ್ರರು ಮೃತಪಟ್ಟಿದ್ದಾರೆ ಎಂದು ಇಸ್ರೇಲಿ ಪಡೆಗಳು ದೃಢಪಡಿಸಿವೆ. ಮೃತರನ್ನು ಹಮಾಸ್ ಮಿಲಿಟರಿಯ ಸೆಲ್ ಕಮಾಂಡರ್ ಅಮೀರ್ ಹನಿಯೆಹ್, ಮೊಹಮ್ಮದ್ ಮತ್ತು ಹಝಿಮ್ ಹನಿಯೆಹ್ ಎಂದು ಗುರುತಿಸಲಾಗಿದೆ.
“ಐಎಎಫ್ ವಿಮಾನದ ದಾಳಿಗೆ ಸೆಂಟ್ರಲ್ ಗಾಜಾದಲ್ಲಿ ಹಮಾಸ್ ಮಿಲಿಟರಿ ವಿಭಾಗದ ಸೆಲ್ ಕಮಾಂಡರ್ ಅಮೀರ್ ಹನಿಯೆಹ್, ಹಮಾಸ್ ಮಿಲಿಟರಿ ಕಾರ್ಯಕರ್ತರಾದ ಮೊಹಮ್ಮದ್ ಮತ್ತು ಹಝೀಮ್ ಹನಿಯೆಹ್ ಅವರು ಮೃತಪಟ್ಟಿದ್ದಾರೆ. ಈ ಮೂವರು ಕಾರ್ಯಕರ್ತರು ಹಮಾಸ್ ರಾಜಕೀಯ ಅಧ್ಯಕ್ಷ ಇಸ್ಮಾಯಿಲ್ ಹನಿಯೆಹ್ ಅವರ ಪುತ್ರರು” ಎಂದು ಇಸ್ರೇಲ್ ರಕ್ಷಣಾ ಪಡೆ ಖಚಿತಪಡಿಸಿದೆ. ಐಡಿಎಫ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ವಿಚಾರವನ್ನು ಪೋಸ್ಟ್ ಹಂಚಿಕೊಂಡಿದೆ.
ಅಲ್ಲದೇ, ರಂಜಾನ್ ಮೊದಲ ದಿನ ಶಾತಿ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಹನಿಯೆಹ್ ಅವರ ನಾಲ್ವರು ಮೊಮ್ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ. ಇಸ್ರೇಲಿ ಸೇನೆ ನಮ್ಮ ಕುಟುಂಬಸ್ಥರನ್ನು ಗುರಿಯಾಗಿಸಿಕೊಂಡರೂ ಪ್ಯಾಲೆಸ್ತೀನ್ ನಾಯಕರು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಹತ್ಯೆಗಳು ಪರಿಣಾಮ ಬೀರುವುದಿಲ್ಲ ಎಂದು ಹನಿಯೆಹ್ ಅಲ್ ಜಝೀರಾಗೆ ತಿಳಿಸಿದ್ದಾರೆ.
ಅಲ್ ಜಝೀರಾ ಅರೇಬಿಕ್‌ಗೆ ನೀಡಿದ ಸಂದರ್ಶನದಲ್ಲಿ, ಹನಿಯೆಹ್ ತಮ್ಮ ಮಕ್ಕಳಾದ ಹಝಿಮ್, ಅಮೀರ್, ಮೊಹಮ್ಮದ್ ಮತ್ತು ಮೊಮ್ಮಕ್ಕಳನ್ನು ಕಳೆದುಕೊಂಡಿರುವುದಾಗಿ ದೃಢಪಡಿಸಿದ್ದಾರೆ. ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹಮಾಸ್ ನಾಯಕನ ಮೊಮ್ಮಕ್ಕಳು ಸಹ ಸಾವನ್ನಪ್ಪಿದ್ದಾರೆ ಎಂದು ಶೆಹಾಬ್ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ.