ಗುರುನಂದನ್‍ ಹೊಸ ಚಿತ್ರ ಮಿಸ್ಟರ್ ಜಾಕ್‍ ಟೀಸರ್‍ ಅನಾವರಣ

Ravi Talawar
ಗುರುನಂದನ್‍ ಹೊಸ ಚಿತ್ರ ಮಿಸ್ಟರ್ ಜಾಕ್‍ ಟೀಸರ್‍ ಅನಾವರಣ
WhatsApp Group Join Now
Telegram Group Join Now
 ರ್ಯಾಂಕ್ ಸ್ಟಾರ್ ಗುರುನಂದನ್‍, ಮಂಡಿಮನೆ ಟಾಕೀಸ್‍ ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿ, ಅದರಡಿ ಸ್ನೇಹಿತರೊಂದಿಗೆ ಜೊತೆಗೂಡಿ ಒಂದು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.  ಗುರುನಂದನ್‍ ಹುಟ್ಟುಹಬ್ಬದ  ಸಂದರ್ಭದಲ್ಲಿ ಚಿತ್ರತಂಡ ಟೈಟಲ್ ಟೀಸರ್‍ ಬಿಡುಗಡೆ ಮಾಡುವ ಮೂಲಕ ಗುರುನಂದನ್‍ಗೆ ಉಡುಗೊರೆ ನೀಡಿದ್ದಾರೆ.  ಚಿತ್ರಕ್ಕೆ ‘ಮಿಸ್ಟರ್ ಜಾಕ್’ ಎಂಬ ಹೆಸರನ್ನು ಇಡಲಾಗಿದೆ.
ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ.ಈ ಚಿತ್ರಕ್ಕೆ ಈ ಚಿತ್ರಕ್ಕೆ ಅಶ್ವಿನಿ‌ ಪುನೀತ್ ರಾಜ್‍ಕುಮಾರ್ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದ್ದರು.
     ಈ ಚಿತ್ರಕ್ಕೆ  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸುಮಂತ್ ಗೌಡ ಮಾತನಾಡಿ “ಇದು ನನ್ನ ಮೊದಲ ಚಿತ್ರ. ಗುರುನಂದನ್‍ ಅವರಿಗೆ ಹೋಗಿ ಮೊದಲು ಕಥೆ ಹೇಳಿದಾಗ, ಅವರಿಗೆ ಇಷ್ಟವಾಯಿತು. ನಾನೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತೇನೆ ಎಂದರು. ಇಲ್ಲಿ ನಾಯಕನ ಹೆಸರು ಜಾನಕಿರಾಮ್‍. ಸ್ಟ್ಯಾಂಡ್ ಅಪ್ ಕಾಮಿಡಿಯನ್ ಅವರುಗಳು ತಮ್ಮ ಹೆಸರುಗಳನ್ನು ಚಿಕ್ಕದಾಗಿ ಇಟ್ಟುಕೊಳ್ಳುತ್ತಾರೆ. ಹಾಗಾಗಿ, ನಾಯಕ ತನ್ನನ್ನು ‘ಮಿಸ್ಟರ್ ಜ್ಯಾಕ್‍’ ಎಂದು ಗುರುತಿಸಿಕೊಳ್ಳುತ್ತಿರುತ್ತಾರೆ. ಇದೊಂದು ರೊಮ್ಯಾಂಟಿಕ್‍ ಕಾಮಿಡಿ ಮತ್ತು ಫ್ಯಾಮಿಲಿ ಡ್ರಾಮಾ. ಗುರುನಂದನ್‍ ಅವರನ್ನು ಬೇರೆ ತರಹ ತೋರಿಸುವ ಪ್ರಯತ್ನವನ್ನು ಚಿತ್ರದಲ್ಲಿ ಮಾಡುತ್ತಿದ್ದೇವೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ” ಎಂದು ತಿಳಿಸಿದರು.
    ಗುರುನಂದನ್‍  “ಇವತ್ತು ಟೀಸರ್‍ ಮತ್ತು ಟೈಟಲ್‍ ರಿವೀಲ್‍ ಮಾಡುತ್ತಾರೆ ಎಂಬುದು ನನಗೂ ಗೊತ್ತಿರಲಿಲ್ಲ. ಚಿತ್ರತಂಡದವರು ಸರ್‍ಪ್ರೈಸ್‍ ಇದೆ ಎಂದಷ್ಟೇ ಹೇಳಿದ್ದರು. ಇದ್ಯಾವುದನ್ನೂ ನನಗೆ ತೋರಿಸಿರಲಿಲ್ಲ. ನನ್ನ ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ ಈ ಟೀಸರ್‍ ಕೊಟ್ಟಿದ್ದಾರೆ. ಎಲ್ಲರಿಗೂ ನನ್ನ ಧನ್ಯವಾದಗಳು. ಈ ಕಥೆ ಕೇಳಿದಾಗ ನಾವೇ ನಿರ್ಮಾಣ ಮಾಡಬೇಕು ಅಂತನಿಸಿತ್ತು. ಅಷ್ಷೊಂದು ಚೆನ್ನಾಗಿತ್ತು ಈ ಕಥೆ. ಇದುವರೆಗೂ
ಸ್ಟ್ಯಾಂಡ್ ಅಪ್ ಕಾಮಿಡಿ ಬಗ್ಗೆ ಕನ್ನಡದಲ್ಲಿ ಚಿತ್ರ ಮಾಡಿರಲಿಲ್ಲ. ಅಂಥದ್ದೊಂದು ಪ್ರಯತ್ನವನ್ನು ನಾವು ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ. ನಮ್ಮ ಸ್ನೇಹಿತರೆಲ್ಲರೂ ಸಹ ನಿರ್ಮಾಪಕರಾಗಿ ಕೈ ಜೋಡಿಸಿದರು. ಹಾಗೆಯೇ ಚಿತ್ರೀಕರಣ ಸಹ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಶೇಕಡ 75ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಕೊನೆಯ ಹಂತದ ಚಿತ್ರೀಕರಣ ಜನವರಿ ಮೊದಲ ವಾರದಿಂದ ಶುರುವಾಗಲಿದೆ. ಒಂದು ಹಾಡು ಹೊರತುಪಡಿಸಿದರೆ, ಜನವರಿಯಲ್ಲಿ ಮಿಕ್ಕೆಲ್ಲಾ ಭಾಗದ ಚಿತ್ರೀಕರಣ ಮುಗಿಯಲಿದೆ. ಚಿತ್ರತಂಡದ ಸಹಕಾರ ಮತ್ತು ಪ್ರೋತ್ಸಾಹದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ”.
     “ಹಾಸ್ಯ ಮಾಡುವವರ ಕಥೆ ಇದು. ಇಲ್ಲಿ ನಾಯಕ ಒಬ್ಬ ಸ್ಟ್ಯಾಂಡಪ್ ಕಾಮಿಡಿಯನ್  ಆಗಿ ಕೆಲಸ ಮಾಡುತ್ತಿರುತ್ತಾನೆ. ಆದರೆ ಇದರ ಹಿಂದೆ ಅವನ ಜೀವನದ ನೋವಿರುತ್ತದೆ ಇದನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಏನೇ ನೋವಿದ್ದರೂ, ಅದನ್ನು ಹೊರಗೆ ತೋರಿಸದೇ, ಎಲ್ಲರನ್ನೂ ನಗಿಸುವುದು, ದೊಡ್ಡ ಸವಾಲಿನ ಕೆಲಸ. ನನ್ನ ಹಿಂದಿನ ಚಿತ್ರಗಳಲ್ಲಿ ಮಾತುಗಳ ಮೂಲಕ ಹಾಸ್ಯ ಇರುತ್ತಿತ್ತು. ಆದರೆ, ಇಲ್ಲಿ ಸ್ವಾಭಾವಿಕವಾಗಿ ಮತ್ತು ತಕ್ಷಣವೇ ನಗಿಸುವ ಪ್ರಯತ್ನ ಮಾಡಿದ್ದೇವೆ. ಇಲ್ಲಿ ನಿರ್ದೇಶಕರು ಹೊಸಬರಾದರೂ, ಹಳಬರ ರೀತಿ ಕೆಲಸ ಮಾಡುತ್ತಿದ್ದಾರೆ. ಸಮಾಧಾನವಾಗುವವರೆಗೂ, ಅಂದುಕೊಂಡ ಔಟ್‍ಪುಟ್‍ ಸಿಗುವವರೆಗೂ ಅವರು ಬಿಡುವುದಿಲ್ಲ” ಎಂದರು.
     ಚಿತ್ರದಲ್ಲಿ ನಾಯಕಿಯಾಗಿ ‘ಹರಿಕಥೆ ಅಲ್ಲ ಗಿರಿಕಥೆ’ ಖ್ಯಾತಿಯ ತೇಜಸ್ವಿನಿ ಪೂಣಚ್ಛ ನಟಿಸುತ್ತಿದ್ದಾರೆ. “ನನ್ನದು ಸಸ್ಪೆನ್ಸ್ ಪಾತ್ರ. ಈ ಚಿತ್ರದಲ್ಲಿ ಬರೀ ಕಾಮಿಡಿಯಷ್ಟೇ ಅಲ್ಲ, ತುಂಬಾ ಸೆಂಟಿಮೆಂಟ್ ಸಹ ಇದೆ. ಅದೆಲ್ಲವನ್ನು ಚೆನ್ನಾಗಿ ಪೋಣಿಸಿದ್ದಾರೆ. ಚಿತ್ರ ಚೆನ್ನಾಗಿ ಬಂದಿದೆ. ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾತ್ರ ಬಾಕಿ ಇದೆ. ಇದೊಂದು ತಂಡದ ಪ್ರಯತ್ನ. ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಬರುವುದಕ್ಕೆ ಸಾಧ್ಯವಾಗಿದೆ” ಎಂದರು. ಚಿತ್ರದಲ್ಲಿ ಮಿತ್ರ, ಧರ್ಮಣ್ಣ ಕಡೂರು, ಗೋಪಾಲಕೃಷ್ಣ ದೇಶಪಾಂಡೆ, ಗಿರಿ, ಸುಷ್ಮಿತಾ ಮುಂತಾದವರು ಹಾಗು ಕಾರ್ತಿಕ್‍ ಪತ್ಥಾರ್ ಮುಂತಾದ ಜನಪ್ರಿಯ
ಸ್ಟ್ಯಾಂಡ ಅಪ್ ಕಾಮಿಡಿಯನ್ ಅನೇಕರು ಸಹ ನಟಿಸುತ್ತಿದ್ದಾರೆ. ಚಿತ್ರಕ್ಕೆ ಕಿರಣ್ ರವೀಂದ್ರನಾಥ್‍ ಸಂಗೀತ ಸಂಯೋಜಿಸುತ್ತಿದ್ದು, ಶಿವಸೇನ ಛಾಯಾಗ್ರಹಣವಿದೆ.
WhatsApp Group Join Now
Telegram Group Join Now
Share This Article