ಬೆಂಗಳೂರು: ರಾಜ್ಯದಲ್ಲಿ ಡೆಂಘೀ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಗುರುವಾರ ಒಂದೇ ದಿನದಲ್ಲಿ 494 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಪ್ರಕರಣ ಸಂಖ್ಯೆ 16,038ಕ್ಕೇರಿದ್ದು, ಈವರೆಗೆ ಒಟ್ಟು 10 ಜನರು ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಹೆಚ್ಚು ಡೆಂಘೀ ಪ್ರಕರಣಗಳು ಕಂಡುಬಂದಿರುವ 10 ಜಿಲ್ಲೆಗಳಿಗೆ ಆರೋಗ್ಯ ಇಲಾಖೆ ಉಪನಿರ್ದೇಶಕರು ತೆರಳಿ ಭೇಟಿ ನೀಡಿ, ಮೇಲ್ವಿಚಾರಣೆ ನಡೆಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದ್ದಾರೆ.
ಜು.25ರಂದು 478 ಮಂದಿ ಗುಣಮುಖರಾಗಿದ್ದು, 203 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. 0-1 ವರ್ಷದೊಳಗಿನ 20 ಮಕ್ಕಳಿಗೆ, 1ರಿಂದ 18 ವರ್ಷದ 166 ಮಕ್ಕಳಿಗೆ ಹಾಗೂ 18 ವರ್ಷ ಮೇಲ್ಪಟ್ಟ 308 ಜನರಲ್ಲಿ ಸೋಂಕು ದೃಢವಾಗಿದೆ. ಅಲ್ಲದೇ, ಬಿಬಿಎಂಪಿ ವ್ಯಾಪ್ತಿಯಲ್ಲಿ 7,280, ಬೆಂಗಳೂರು ನಗರ 106, ಬೆಂಗಳೂರು ಗ್ರಾಮಾಂತರ 84, ರಾಮನಗರ 168, ಕೋಲಾರ 156, ಚಿಕ್ಕಬಳ್ಳಾಪುರ 176, ತುಮಕೂರು 388, ಚಿತ್ರದುರ್ಗ 461, ದಾವಣಗೆರೆ 371, ಶಿವಮೊಗ್ಗ 398, ಮೈಸೂರು 593, ಉಡುಪಿ 316, ಕೊಡಗು 169 ಸೇರಿದಂತೆ ಒಟ್ಟಾರೆ 16,038 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಡೆಂಘೀ ಜ್ವರ ನಿಯಂತ್ರಣದ ಕುರಿತು ಸಾರ್ವ ಜನಿಕರ ಹೆಚ್ಚಿನ ಮಾಹಿತಿಗಾಗಿ 1800-425-8330 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.