ಗುಲ್ ಮೊಹರ್ ಸುಂದರ ಹೂವಿನ ಮರಗಳ ಕುರಿತು ವಿಶೇಷ ಲೇಖನ
“ರಾಷ್ಟ್ರವಾಗಿ ಅಸ್ತಿತ್ವದಲ್ಲಿರಲು, ರಾಜ್ಯವಾಗಿ ಏಳಿಗೆ ಹೊಂದಲು, ಜನರಂತೆ ಬದುಕಲು, ನಾವು ಮರಗಳನ್ನು ಹೊಂದಿರಬೇಕು.” – ಥಿಯೋಡರ್ ರೂಸ್ವೆಲ್ಟ್ ಹೇಳಿರುವ ಹಾಗೆ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿರುವ ಆಮ್ಲಜನಕ ಪೂರೈಕೆ ಮಾಡುವ ಮರಗಳು ನಮ್ಮ ಇರುವಿಕೆಯನ್ನು ಅಸ್ತಿತ್ವದಲ್ಲಿರುವ ಹಾಗೆ ನೋಡಿಕೊಳ್ಳುತ್ತವೆ.
ಹೌದು ಓದುಗರೆ ನಾನು ಹೇಳ ಹೊರಟಿರುವುದು ಒಂದು ಸುಂದರ ಉಜ್ವಲ ಕೆಂಬಣ್ಣದ ಹೂ ಬಿಡುವ ಗುಲ್ಮೊಹರ್ ಮರದ ಬಗ್ಗೆ.ನನ್ನೂರು ರಾಮಗೇರಿಯಿಂದ ಲಕ್ಷ್ಮೇಶ್ವರದ ಇಟ್ಟಿಗೆರೆ, ಬಟ್ಟೂರ ಹಾಗೂ ಗೊಜನೂರ ಮಾರ್ಗದ ರಸ್ತೆ ಬದಿಯಲ್ಲಿ ಅಬ್ಬಾ..! ಕೆಂಪು ಹೂಗಳ ಸಂಭ್ರಮ ಈಗ ಹೇಳತೀರದು..! ಹಸಿರು ಎಲೆಗಳಿಗೆ ಒಂಚೂರೂ ಜಾಗ ನೀಡದೇ ಅರಳುವ ಹೂವು..!
‘ಹೂವಿನಿಂದ ನಾರು ಸ್ವರ್ಗಕ್ಕೇರಿತು’ ಎಂಬಂತೆ ತನ್ನ ಕೆಂಬಣ್ಣದ ಚೆಲುವ ಸಿರಿಯ ಹೂಗಳಿಂದ ಕ್ಷಣ ಮನಸ್ಸು ಮುದಗೊಳಿಸುವ, ತನ್ನ ಅಂದದ ಬಣ್ಣದಿಂದ ಆಕರ್ಷಿಸುವ ‘ಗುಲ್ ಮೊಹರ್’ ಹೂಗಳು ಬಿರು ಬೇಸಿಗೆಯ ಬಿಸಿಲ(ಬೆಂಕಿಯ)ಲ್ಲಿ ಅರಳುವ ಸುಂದರಿಯರು ಎಂದರೆ ಉತ್ಪ್ರೇಕ್ಷೆಯಲ್ಲ. ಹಾಗೆಯೇ ಈ ವರ್ಷ ಎಪ್ರೀಲ್ – ಮೇ ತಿಂಗಳ ಮೂರನೇ ವಾರದಿಂದ ಶಿರಹಟ್ಟಿಯ ಡಬಾಲಿ ಶಾಲೆಯ ಆವರಣದಲ್ಲಿ ಮತ್ತು ತಾಲ್ಲೂಕು ಕ್ರೀಡಾಂಗಣದಲ್ಲಿ ಕೆಂಪು ಹೂಗಳ ಗುಲ್ಮೊಹರ್ ಮರಗಳು ಕಣ್ಣಿಗೆ ಮತ್ತು ಮನಸ್ಸಿಗೆ ಮುದ ನೀಡುತ್ತವೆ. ಹೀಗೆ ಬಹುತೇಕ ರಸ್ತೆ ಪಕ್ಕದ ಮರಗಳಲ್ಲಿ ಗೋಚರಿಸುವ ವಿಶಿಷ್ಟ- ಅಷ್ಟೇ ವಿಭಿನ್ನ ಬಗೆಯಲ್ಲಿ ಬೆಳೆದು ನಿಲ್ಲುವ ಈ ಗುಲ್ ಮೊಹರ್ ಮರಗಳಲ್ಲಿನ ಕೆಂಪು ಹೂಗಳನ್ನು ಕಂಡ ಕ್ಷಣ ಮನಸ್ಸು ಸೆಳೆವ ಜೊತೆಗೆ ಹಿತಾನುಭವ ನೀಡುತ್ತವೆ.
#ಪ್ರವಾಸಿಗರ ಆಕರ್ಷಣೀಯ ಮರಗಳು:
ಈ ಭಾಗದಲ್ಲಿ ಸ್ಥಳಗಳನ್ನು ವೀಕ್ಷಿಸಲು ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ತನ್ನ ಚೆಲುವ ಸೊಬಗಿನಿಂದ ಈ ಗುಲ್ ಮೊಹರ್ ಹೂವಿನ ಮರಗಳು ಅವರಿಗೆ ವಿಶಿಷ್ಟ ಸ್ವಾಗತ ಕೋರಿ, ಮನಸ್ಸಿಗೆ ಸಂತೋಷ ನೀಡುತ್ತವೆ. ಇವುಗಳಿಗೆ ಉತ್ತರ ಕರ್ನಾಟಕದಲ್ಲಿ ಸಂಕೇಶ್ವರ ಮರ ಎಂದೇ ಹೆಸರು. ಈ ಗಿಡಗಳು ಪ್ರವಾಸಿಗರನ್ನು ಆಕರ್ಷಿಸುವ ವಿಶಿಷ್ಟವಾದ ಗುಣಗಳನ್ನು ಹೊಂದಿವೆ.
ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಕೆಂಡದಂತಹ ಉರಿ ಬಿಸಿಲು. ಸೆಕೆಯ ಸಂಕಟ, ತಾಪಕ್ಕೆ ದೂರ ಓಡುವಂತೆ ಮಾಡಿದ್ದರೆ, ಅಂಥಾ ಬಿಸಿಲಲ್ಲಿ ಗುಲ್ (ಹೂ) ಮೊಹರ್ (ನವಿಲು) ಜೀವ ಕಳೆ ಪಡೆದಿರುವಂತೆ, ನಸು ನಗುತ್ತಲೇ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುವುದು ಈ ಹೂವಿನ ವಿಶೇಷತೆಯಾಗಿ ಬಿಟ್ಟಿದೆ.
#ಗುಲ್ ಮೊಹರ್ ಅಥವಾ ಮೇ ಫ್ಲವರ್ ಮರದ ಪರಿಚಯ:
ಡೆಲೋನಿಕ್ಸ್ ರೆಜಿಯಾ ಎಂಬುದು ಗುಲ್ಮೊಹರ್ ಮರದ ವೈಜ್ಞಾನಿಕ ಹೆಸರು. ಇದು ಮಡಗಾಸ್ಕರ್ನಲ್ಲಿ ಸ್ಥಳೀಯವಾದ ಸೀಸಲ್ಪಿನಿಯೊಡೆಯೇ ಉಪಕುಟುಂಬದ ಫ್ಯಾಬೇಸಿಯ ಹುರುಳಿ ಕುಟುಂಬದಲ್ಲಿ ಹೂಬಿಡುವ ಸಸ್ಯದ ಒಂದು ಜಾತಿಯಾಗಿದೆ.
ಸಸ್ಯಶಾಸ್ತ್ರಜ್ಞ ವೆನ್ಸೆಲ್ ಬೋಜರ್ ಅವರು 19 ನೇ ಶತಮಾನದ ಆರಂಭದಲ್ಲಿ ಅದರ ಸ್ಥಳೀಯ ಮಡಗಾಸ್ಕರ್ನಲ್ಲಿ ಕಂಡುಹಿಡಿದರು.ಗುಲ್ಮೊಹರ್ ಹೂವಿನಲ್ಲಿಯೇ ಅದ್ದೂರಿ ಮರವಾಗಿದೆ – ಕೆಲವರು ವಿಶ್ವದ ಅತ್ಯಂತ ವರ್ಣರಂಜಿತ ಮರ ಎಂದು ಹೇಳುತ್ತಾರೆ. ವಸಂತ ಮತ್ತು ಬೇಸಿಗೆಯಲ್ಲಿ ಹಲವಾರು ವಾರಗಳವರೆಗೆ ಇದು ಜ್ವಾಲೆಯಾಗಿದೆ. ಈ ರೀತಿ ಕೆಂಪು- ಹೂವುಗಳು ಗುಲ್ ಮೊಹರ್ ಮರ ಸಮೃದ್ಧ ಸಮೂಹಗಳಿಂದ ಮುಚ್ಚಲ್ಪಟ್ಟಿರುತ್ತದೆ.
ಇದು ಜರೀಗಿಡದಂತಹ ಎಲೆಗಳು ಮತ್ತು ಬೇಸಿಗೆಯಲ್ಲಿ ಕಿತ್ತಳೆ-ಕೆಂಪು ಹೂವುಗಳ ಅಬ್ಬರದ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ. ಪ್ರಪಂಚದ ಅನೇಕ ಉಷ್ಣವಲಯದ ಭಾಗಗಳಲ್ಲಿ ಇದನ್ನು ಅಲಂಕಾರಿಕ ಮರವಾಗಿ ಬೆಳೆಸಲಾಗುತ್ತದೆ ಮತ್ತು ಇಂಗ್ಲೀಷಿನಲ್ಲಿ ಇದನ್ನು ರಾಯಲ್ ಪೊಯಿನ್ಸಿಯಾನಾ , ಫ್ಲಾಂಬಾಯಿಂಟ್ , ಫೀನಿಕ್ಸ್ ಹೂವು,ಕಾಡಿನ ಜ್ವಾಲೆ ಅಥವಾ ಜ್ವಾಲೆಯ ಮರ ಎಂದೇ ಹೆಸರುವಾಸಿಯಾಗಿದೆ.
#ವಿವಿಧತೆಯ ಹೆಸರುಗಳು:
ಭಾರತದ ವಿವಿಧ ಭಾಗಗಳಲ್ಲಿ ಮತ್ತು ವಿವಿಧ ದೇಶಗಳಲ್ಲಿ ಮರವನ್ನು ನೆಡಲಾಗುತ್ತದೆ.
ಭಾರತದಲ್ಲಿ ಇದನ್ನು ನೈಸರ್ಗಿಕಗೊಳಿಸಲಾಗಿದೆ ಮತ್ತು ಇದನ್ನು ಬೀದಿ ಮರವಾಗಿ ವ್ಯಾಪಕವಾಗಿ ಬೆಳೆಸಲಾಗುತ್ತದೆ.
ಹೀಗಾಗಿ ಭಾರತದಲ್ಲಿ ಇದನ್ನು ಮೇ-ಹೂವಿನ ಮರ(May Flower),ಗುಲ್ಮೊಹರ್ ಅಥವಾ ಗುಲ್ ಮೊಹರ್ ಎಂದು ಕರೆಯಲಾಗುತ್ತದೆ. ಹಾಗೇಯೇ ಪಶ್ಚಿಮ ಬಂಗಾಳ , ಮತ್ತು ಒಡಿಶಾದಲ್ಲಿ ಇದನ್ನು ಕೃಷ್ಣ ಚುರಾ ಎಂದು ಕರೆಯಲಾಗುತ್ತದೆ. ಶ್ರೀಲಂಕಾದಲ್ಲಿ ಇದನ್ನು ಸಿಂಹಳದಲ್ಲಿ ಮಾರ ಮರ ಎಂದು ಕರೆಯಲಾಗುತ್ತದೆ. ಆದರೂ ಸ್ವಲ್ಪ ಸಮಯದವರೆಗೆ ಇದನ್ನು ನೆರಳಿನ ಮರವಾಗಿ ಪರಿಚಯಿಸಲು ಕಾರಣವಾದ ಬ್ರಿಟಿಷ್ ನಾಗರಿಕ ಸೇವಕಲೆ ಮೆಸುರಿಯರ್ ನಂತರ ಇದನ್ನು ಲಾಮಾಸೂರಿಯ ಮರ ಎಂದು ಕರೆಯಲಾಯಿತು.ಇದನ್ನು ಪಾಕಿಸ್ತಾನದ ಕರಾಚಿಯಲ್ಲಿಯೂ ಬೆಳೆಯಲಾಗುತ್ತದೆ . ಮಾರಿಷಸ್ ಮತ್ತು ಲಾ ರಿಯೂನಿಯನ್ನಲ್ಲಿಇದು ಹೊಸ ವರ್ಷದ ಬರುವಿಕೆಯನ್ನು ಪ್ರಕಟಿಸುತ್ತದೆ.
#ಸಾಂಸ್ಕೃತಿಕ ಮಹತ್ವ:
ಭಾರತದ ರಾಜ್ಯವಾದ ಕೇರಳದಲ್ಲಿ , ರಾಯಲ್ ಪೊಯಿನ್ಸಿಯಾನಾವನ್ನು ಕಾಲ್ವರಿಪ್ಪು ( ಕಾಲ್ವರಿಪೂವ್) ಎಂದು ಕರೆಯಲಾಗುತ್ತದೆ , ಇದರರ್ಥ ” ಕ್ಯಾಲ್ವರಿ ಹೂವು “. ಕೇರಳದ ಸಂತ ಥಾಮಸ್ ಕ್ರಿಶ್ಚಿಯನ್ನರಲ್ಲಿ ಒಂದು ಜನಪ್ರಿಯ ನಂಬಿಕೆಯಿದೆ.ಅದೆನೆಂದರೆ ಯೇಸುವನ್ನು ಶಿಲುಬೆಗೇರಿಸಿದಾಗ, ಅವನ ಶಿಲುಬೆಯ ಸಮೀಪದಲ್ಲಿ ಒಂದು ಸಣ್ಣ ರಾಯಲ್ ಪೊಯಿನ್ಸಿಯಾನ ಮರವಿತ್ತು . ಮರದ ಹೂವುಗಳ ಮೇಲೆ ಯೇಸುಕ್ರಿಸ್ತನ ರಕ್ತವು ಚೆಲ್ಲಲ್ಪಟ್ಟಿ ಮತ್ತು ರಾಯಲ್ ಪೊಯಿನ್ಸಿಯಾನಾ ಹೂವುಗಳು ತೀಕ್ಷ್ಣವಾದ ಕೆಂಪು ಬಣ್ಣವನ್ನು ಪಡೆಯುತ್ತವೆ ಎಂದು ನಂಬಲಾಗಿದೆ.ಇದನ್ನು ಕೇರಳದ ಹಲವು ಪ್ರದೇಶಗಳಲ್ಲಿ ವಾಗಾ ಎಂದೂ ಕರೆಯುತ್ತಾರೆ.
#ಗುಲ್ ಮೊಹರ್ ಉಪಯುಕ್ತತೆ:
ಗುಲ್ ಮೊಹರ್ ತನ್ನ ಅಲಂಕಾರಿಕ ಮೌಲ್ಯದ ಜೊತೆಗೆ, ಉಷ್ಣವಲಯದ ಪರಿಸ್ಥಿತಿಗಳಲ್ಲಿ ಇದು ಉಪಯುಕ್ತ ನೆರಳಿನ ಮರವಾಗಿದೆ. ಏಕೆಂದರೆ ಇದು ಸಾಮಾನ್ಯವಾಗಿ ಸಾಧಾರಣ ಎತ್ತರಕ್ಕೆ ಬೆಳೆಯುತ್ತದೆ (ಹೆಚ್ಚಾಗಿ 5 ಮೀ ಅಥವಾ 15 ಅಡಿ, ಆದರೆ ಇದು ಗರಿಷ್ಠ ಎತ್ತರ 12 ಮೀ ಅಥವಾ 40 ಅಡಿ ತಲುಪಬಹುದು) ಆದರೆ ವ್ಯಾಪಕವಾಗಿ ಹರಡುತ್ತದೆ ಮತ್ತು ಅದರ ದಟ್ಟವಾದ ಎಲೆಗಳು ಪೂರ್ಣ ನೆರಳು ನೀಡುತ್ತದೆ. ಗಮನಾರ್ಹವಾದ ಶುಷ್ಕ ಋತುವಿನ ಪ್ರದೇಶಗಳಲ್ಲಿ, ಇದು ಬರಗಾಲದ ಸಮಯದಲ್ಲಿ ತನ್ನ ಎಲೆಗಳನ್ನು ಚೆಲ್ಲುತ್ತದೆ. ಆದರೆ ಇತರ ಪ್ರದೇಶಗಳಲ್ಲಿ ಇದು ವಾಸ್ತವಿಕವಾಗಿ ನಿತ್ಯಹರಿದ್ವರ್ಣವಾಗಿರುತ್ತದೆ.
ಇದಲ್ಲದೆ ಗುಲ್ಮೊಹರ್ ವಿಷಕಾರಿಯಲ್ಲದ ಮತ್ತು ಹೂವಿನ ಮೊಗ್ಗುಗಳು ಖಾದ್ಯ ಮತ್ತು ಸುವಾಸನೆಗಾಗಿ ಬಳಸಲಾಗುತ್ತದೆ.ಆದರೆ ಗುಲ್ಮೊಹರ್ ಕಾಡಿನಲ್ಲಿ ಅಳಿವಿನಂಚಿನಲ್ಲಿರುವುದು ವಿಷಾದನೀಯ ಸಂಗತಿ ಎಂದು ಹೇಳಿದರೆ ತಪ್ಪಾಗಲಾರದು.ಇದು ಆಳವಿಲ್ಲದ ಬೇರುಗಳನ್ನು ಹೊಂದಿರುವ ದೀರ್ಘಕಾಲಿಕ ಸಸ್ಯವಾಗಿದ್ದರಿಂದ ಭಾರೀ ಗಾಳಿ ಮತ್ತು ಮಳೆಯ ಸಮಯದಲ್ಲಿ ಬೀಳುವ ಸಾಧ್ಯತೆಯಿದೆ.
#ರಸ್ತೆಯ ಅಭಿವೃದ್ಧಿ ಹೆಸರಿನಲ್ಲಿ ಅಳಿವಿನಂಚಿನಲ್ಲಿರುವ ಮರಗಳು:
ಜಿಲ್ಲಾ ಹಾಗೂ ರಾಜ್ಯ ಹೆದ್ದಾರಿ ನಿರ್ಮಾಣಕ್ಕಾಗಿ ಕಳೆದ ಆರೇಳು ವರ್ಷಗಳ ಹಿಂದೆ ಸಾವಿರಾರು ಗುಲ್ ಮೊಹರ್ ಮರಗಳ ಮಾರಣ ಹೋಮವಾಗಿವೆ. ಮತ್ತೆ ಹೊಸ ಮಾರ್ಗಕ್ಕೆ ಈಗಿನ ಅನೇಕ ಗುಲ್ ಮೊಹರ್ ಮರಗಳು ಬಲಿಯಾಗಿವೆ. ಅಭಿವೃದ್ಧಿ ಹಾಗೂ ತಂತ್ರಜ್ಞಾನದ ಹೊಡೆತಕ್ಕೆ ಸಿಲುಕಿ ಮುಂಬರುವ ದಿನಗಳಲ್ಲಿ ಈ ಸುಂದರ ‘ಗುಲ್ ಮೊಹರ್’ ಹೂ, ಪ್ರಕೃತಿ ಪ್ರಿಯರಿಗೆ ಅಪರೂಪ ಆಗುತ್ತಿವೆ ಎಂಬುದು ಬೇಸರದ ಸಂಗತಿಯಾಗಿದೆ.ಏನೇ ಇರಲಿ ಕವಿಯ ಬಣ್ಣನೆಯಂತೆ ‘ಹೂ ಚೆಲುವೆಲ್ಲಾ ತಂದೆಂದಿತು’ ಎನ್ನುವ ಗುಲ್ ಮೊಹರ್ ಹೂಗಳ ಅಂದ–ಚಂದ, ಆಕರ್ಷಣೆಗೆ ತನಗೆ ತಾನೇ ಸಾಟಿ ಎಂದು ಕೆಂಬಣ್ಣದಿಂದ ಮೈ, ಮನಗಳಿಗೆ ಪ್ರಫುಲ್ಲತೆ ನೀಡುವ ಹೂಗಳು ಬಿರು ಬಿಸಿಲಲ್ಲೂ ನಸುನಗುತ್ತಾ ಪ್ರವಾಸಿಗರು, ಪ್ರಯಾಣಿಕರನ್ನು ಸೂಜಿಗಲ್ಲಿನಂತೆ ತಮ್ಮತ್ತ ಸೆಳೆವ ಇವು ಪುಷ್ಪಲೋಕದ ಅಪ್ಸರೆಯರು ಎಂದು ಹೇಳಿದರೆ ತಪ್ಪಾಗಲಾರದು.
ಒಟ್ಟಾರೆಯಾಗಿ ನನ್ನ ದೃಷ್ಟಿಯಲ್ಲಿ ಈ ‘ಮೇಫ್ಲವರ್ಸ್’ ಕೆಂಪು ಬಿಸಿಯಾದ ಎಪ್ರೀಲ್-ಮೇನಲ್ಲಿ ತಮ್ಮ ಆಕರ್ಷಕವಾದ ಕೆಂಪು ಹೂವುಗಳೊಂದಿಗೆ ಸಸ್ಯ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾದ ಪ್ರಭಾವ ಬೀರುತ್ತವೆ. ಹಾಗೆಯೇ ಮನಸ್ಸಿಗೆ ಮುದ ನೀಡುವ ಮೂಲಕ ಆರೋಗ್ಯ ಚೇತನಕ್ಕೆ ಇಂಬು ನೀಡುತ್ತವೆ.
ಬಸವರಾಜ ಎಮ್ ಯರಗುಪ್ಪಿ
ಸಾ.ಪೊ ರಾಮಗೇರಿ.ತಾಲ್ಲೂಕು ಲಕ್ಷ್ಮೇಶ್ವರ.
ಜಿಲ್ಲಾ ಗದಗ. ದೂರವಾಣಿ 9742193758
ಮಿಂಚಂಚೆ [email protected]