ನವದೆಹಲಿ: ಜಿಎಸ್‌ಟಿ ಮಂಡಳಿಯು ಇದೇ ಡಿಸೆಂಬರ್ 21ರಂದು ರಾಜಸ್ಥಾನದ ಜೈಸಲ್ಮೇರ್ನಲ್ಲಿ ಸಭೆ ಸೇರಲಿದ್ದು, ಇಲ್ಲಿ ಬಹು ನಿರೀಕ್ಷಿತ ಆರೋಗ್ಯ, ಜೀವ ವಿಮೆ ಮೇಲಿನ ಜಿಎಸ್‌ಟಿ ವಿನಾಯಿತಿ ಕುರಿತು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ರಾಜ್ಯದ ಇತರೆ ಅಧಿಕಾರಿಗಳು ಮಂಡಳಿಯಲ್ಲಿರಲಿದ್ದಾರೆ. ರಾಜ್ಯ ಸಚಿವರ ಸಮಿತಿ ಶಿಫಾರಸ್ಸಿನ ಅನ್ವಯ ತೆರಿಗೆ ದರ ಕಡಿತ ಮತ್ತು ಸಾಮಾನ್ಯ ವಸ್ತುಗಳ ಮೇಲೆ ಶೇ 12ರಿಂದ 5ರಷ್ಟು ಸ್ಲಾಬ್ ಇಳಿಕೆ ಕುರಿತು ನಿರ್ಧಾರ ನಡೆಸುವ ಸಾಧ್ಯತೆ ಇದೆ.
ಈ ಸಂಬಂಧ ಪೋಸ್ಟ್ ಮಾಡಿರುವ ಜಿಎಸ್‌ಟಿ ಮಂಡಳಿ 2024ರ ಡಿಸೆಂಬರ್ 21ರಂದು ರಾಜಸ್ಥಾನದ ಜೈಸಲ್ಮೇರ್ನಲ್ಲಿ ಜಿಎಸ್‌ಟಿ ಸಭೆ ನಡೆಯಲಿದೆ ಎಂದು ತಿಳಿಸಿದೆ.
ಮಂಡಳಿಯು ಕಳೆದ ಸಭೆಯನ್ನು ಸೆಪ್ಟೆಂಬರ್ 9ರಂದು ನಡೆಸಿತ್ತು. ಇಲ್ಲಿ ಸಚಿವರ ಗುಂಪು ಅಕ್ಟೋಬರ್ ಅಂತ್ಯದೊಳಗೆ ವಿಮೆ ಜಿಎಸ್‌ಟಿ ಅಂತ್ಯಗೊಳಿಸುವ ಕುರಿತು ನಿರ್ಣಯ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ಸಚಿವರ ಗುಂಪು ಕಳೆದ ತಿಂಗಳು ವಿಮಾ ಪಾಲಿಸಿಗಳಿಗೆ ಪಾವತಿಸಿದ ವಿಮಾ ಕಂತುಗಳನ್ನು ಮತ್ತು ಹಿರಿಯ ನಾಗರಿಕರ ಆರೋಗ್ಯ ವಿಮೆಯನ್ನು ಜಿಎಸ್ಟಿಯಿಂದ ವಿನಾಯಿತಿ ನೀಡಲು ಒಪ್ಪಿಕೊಂಡಿದೆ.
ಹಿರಿಯ ನಾಗರಿಕರ ಹೊರತಾಗಿ ವೈಯಕ್ತಿಕವಾಗಿ ಪಾವತಿಯಾದ ಐದು ಲಕ್ಷದವರೆಗಿನ ಆರೋಗ್ಯ ವಿಮೆಗೆ ವಿನಾಯಿತಿ ಪ್ರಸ್ತಾಪ ಮಾಡಲಾಗಿದೆ. ಆದಾಗ್ಯೂ, 5 ಲಕ್ಷಕ್ಕಿಂತ ಹೆಚ್ಚಿನ ಆರೋಗ್ಯ ವಿಮಾ ರಕ್ಷಣೆಯೊಂದಿಗೆ ಪಾಲಿಸಿಗಳಿಗೆ ಪಾವತಿಸಿದ ಪ್ರೀಮಿಯಂಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ ಮುಂದುವರಿಯಲಿದೆ.