ಬೆಂಗಳೂರು, ಜೂನ್ 3: ಬೆಳಗಾವಿ ವಿಮಾನ ನಿಲ್ದಾಣವುವಿಮಾನ ಪ್ರಯಾಣಿಕರ ದಟ್ಟಣೆಯಲ್ಲಿ ಭಾರಿ ಬೆಳವಣಿಗೆ ಸಾಧಿಸಿರುವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ಹಿಂದಿನ ವರ್ಷದ ಏಪ್ರಿಲ್ಗೆ ಹೋಲಿಸಿದರೆ 2024 ರ ಏಪ್ರಿಲ್‌ನಲ್ಲಿ ಶೇ 64.1 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಬೆಂಗಳೂರು ಮತ್ತು ಮಂಗಳೂರು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಿದರೆ, ಹುಬ್ಬಳ್ಳಿ, ಕಲಬುರಗಿ ಮತ್ತು ಮೈಸೂರು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಬಹಿರಂಗಪಡಿಸಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಾಸಿಕ ಏರ್ ಟ್ರಾಫಿಕ್ ವರದಿಯು ದೇಶದಲ್ಲಿ ಒಟ್ಟಾರೆ ಪ್ರಯಾಣಿಕರ ಬೆಳವಣಿಗೆಯಲ್ಲಿ ಶೇಕಡಾ 6 ರಷ್ಟು ಬೆಳವಣಿಗೆ ತೋರಿಸಿದೆ. 2023 ರ ಏಪ್ರಿಲ್‌ನಲ್ಲಿ 30.56 ಮಿಲಿಯನ್ ಮಂದಿ ಪ್ರಯಾಣಿಸಿದ್ದರೆ, ಏಪ್ರಿಲ್ 2024 ರಲ್ಲಿ 32.39 ಮಿಲಿಯನ್ ಪ್ರಯಾಣಿಕರು ಸಂಚರಿಸಿದ್ದಾರೆ. ವಿದೇಶಕ್ಕೆ ಪ್ರಯಾಣಿಸುವ ಭಾರತೀಯರ ಸಂಖ್ಯೆಯಲ್ಲಿ ಶೇಕಡಾ 16.8 ರಷ್ಟು ಏರಿಕೆ ಯಾಗಿದೆ.
ಬೆಳಗಾವಿ ವಿಮಾನ ನಿಲ್ದಾಣದ ಮೂಲಕ ಈ ವರ್ಷದ ಏಪ್ರಿಲ್‌ನಲ್ಲಿ 31,060 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಕಳೆದ ವರ್ಷ ಇದೇ ತಿಂಗಳು ಕೇವಲ 18,922 ಮಂದಿ ಪ್ರಯಾಣಿಸಿದ್ದರು. ಈ ಮಟ್ಟದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಎರಡು ಪ್ರಮುಖ ಕಾರಣಗಳಿವೆ. 2023ರ ಅಕ್ಟೋಬರ್ನಲ್ಲಿ ಪ್ರಾರಂಭವಾದ ಬೆಳಗಾವಿ-ದೆಹಲಿ ಮಾರ್ಗದಲ್ಲಿ ಇಂಡಿಗೋ ವಿಮಾನದ ದೈನಂದಿನ ಕಾರ್ಯಾಚರಣೆ ನಮಗೆ ದೊಡ್ಡ ಉತ್ತೇಜನವನ್ನು ನೀಡಿತು ಎಂದು ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ಎಸ್ ತ್ಯಾಗರಾಜನ್ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿದೆ. ಮುಂಬೈ ಮಾರ್ಗದಲ್ಲಿ ಸಂಚರಿಸುವ 80 ಆಸನಗಳನ್ನು ಹೊಂದಿರುವ ಸ್ಟಾರ್‌ಏರ್‌ನ ಎಂಬ್ರೇರ್ 175 ವಿಮಾನದ ಜತೆ ಈಗ 50 ಆಸನಗಳನ್ನು ಹೊಂದಿರುವ ಎಂಬ್ರೇರ್ 145 ವಿಮಾನ ಸೇರ್ಪಡೆಯಾಗಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೆ ಮತ್ತೊಂದು ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.