ಇಂಡಿ: ‘ವಿದ್ಯಾರ್ಥಿಗಳು ಓದುವ-ಬರೆಯುವ-ಜ್ಞಾನ ಬೆಳೆಸಿಕೊಳ್ಳುವ ಜೊತೆಗೆ ಬದುಕಿಗೆ ಅಗತ್ಯವಾದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು’ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಪಟ್ಟಣದ ಅಂಜುಮನ್ ಪ್ರೌಢಶಾಲೆಯಲ್ಲಿ ಬುಧವಾರದಂದು ಸಮಾಜ ಸೇವಕ ಹಸನ ಮುಜಾವರ ಇವರ ವತಿಯಿಂದ ‘ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಪೆನ್ನು ವಿತರಣೆ’ ಕಾರ್ಯಕ್ರಮದ ಉಪನ್ಯಾಸಕರಾಗಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದುವ ಜೊತೆಗೆ ಗುರುಭಕ್ತಿ, ಶ್ರದ್ಧೆ, ಆಸಕ್ತಿ, ಸ್ವಯಂ ಶಿಸ್ತನ್ನು ಮೈಗೂಡಿಸಿಕೊಂಡು ಸಾಧನೆಯ ಮಾರ್ಗದಲ್ಲಿ ಸಾಗಬೇಕು. ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.
ಅಂಜುಮನ್ ಇಸ್ಲಾಂ ಕಮೀಟಿ ನಿರ್ದೇಶಕ ಹಾಗೂ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಜಾವೇದ್ ಮೊಮಿನ್ ಮಾತನಾಡಿ, ಮಕ್ಕಳಿಗೆ ಉಚಿತ ನೋಟ್ ಬುಕ್,ಪೆನ್ನುಗಳನ್ನು ವಿತರಿಸುವುದು ಸಮಾಜಮುಖಿ ಕಾರ್ಯವಾಗಿದೆ. ಹಸನ್ ಮುಜಾವರ ಅವರ ಈ ಸಮಾಜ ಸೇವೆ ನಿಜಕ್ಕೂ ಮಾದರಿಯಾಗಿದೆ. ಇಂದಿನ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಅವರು ಸುಂದರ ಬದುಕನ್ನು ಕಟ್ಟಿಕೊಳ್ಳಬಲ್ಲರು ಎಂದು ಹೇಳಿದರು.
ಧರ್ಮ ಗುರುಗಳಾದ ಮುಫ್ತಿ ಅಬ್ದುಲ್ ರೆಹಮಾನ್ ಅರಬ ಸಾನಿಧ್ಯ ವಹಿಸಿ ಮಾತನಾಡಿ, ಮಕ್ಕಳ ಕಲಿಕೆಯಲ್ಲಿ ಸಮುದಾಯದ ಪಾತ್ರ ಮುಖ್ಯವಾಗಿದ್ದು, ಸಮುದಾಯದ ಬೆಂಬಲದಿಂದ, ಮಕ್ಕಳು ಉತ್ತಮವಾಗಿ ಕಲಿತು, ಸತ್ಪ್ರಜೆಗಳಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಮಾಜ ಸೇವಕ ಹಸನ್ ಮುಜಾವರ ಮಾತನಾಡಿ, ಈ ಸಂಸ್ಥೆಯಲ್ಲಿ 10 ನೇ ವರ್ಗದ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯ ಪಿಯುಸಿ ಪ್ರಥಮ ವರ್ಷದ ಪ್ರವೇಶ ಫೀ ಯನ್ನು ಸ್ವತಃ ನಾನೇ ಭರಿಸಿ,ಆ ವಿದ್ಯಾರ್ಥಿಯ ಓದಿಗೆ ಪ್ರೋತ್ಸಾಹ ನೀಡುವದಾಗಿ ವಾಗ್ದಾನ ಮಾಡಿದರು.
ಅಂಜುಮನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹುಸೇನ್ ಜಮಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಶಿಕ್ಷಕ ಮುಜೀಬ್ ಬಾಗವಾನ, ಶಿಕ್ಷಕರಾದ ಹುಮಾಯೂನ್ ಬಿಳವಾರ, ಸುಫಿಯಾ ಚಂದರಗಿ, ಫಾತಿಮಾ ಬೇಗಂ ಘೋಡೆ ಸವಾರ, ಫಯಾಜ್ಅಹ್ಮದ್ ಜಮಖಾನೆ, ಸಲೀಂ ಅತ್ತಾರ, ಸದ್ದಾಂ ಜಮಾದಾರ, ಜಹಾಂಗೀರ ದೇಸಾಯಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹಸನ್ ಮುಜಾವರ ಅವರು ಕಾಣಿಕೆ ನೀಡಿದ ನೋಟ್ ಬುಕ್, ಪೆನ್ನನ್ನು ಎಲ್ಲ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.