ಬೆಂಗಳೂರು, ನವೆಂಬರ್ 17: ಅಬಕಾರಿ ಇಲಾಖೆಯು 579 ಮದ್ಯದಂಗಡಿಗಳ ಇ-ಹರಾಜು ಪ್ರಕ್ರಿಯೆಗೆ ಮುಂದಾಗಿದೆ. ಈ ಹೊತ್ತಿನಲ್ಲೇ ಇದಕ್ಕೆ ದೊಡ್ಡ ವಿಘ್ನ ಎದುರಾಗಿದೆ. ಕೂಡಲೇ ಮದ್ಯದಂಗಡಿಗಳ ಇ-ಹರಾಜು ಪ್ರಕ್ರಿಯೆಯನ್ನು ಕೈಬಿಡುವಂತೆ ಬೆಂಗಳೂರು (Bengaluru) ಹೋಟೆಲ್ಗಳ ಸಂಘ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಪತ್ರ ಬರೆದಿದೆ. ಸಂಪನ್ಮೂಲ ಕ್ರೂಢೀಕರಿಸುವ ಉದ್ದೇಶದಿಂದ ಸರ್ಕಾರ ಇ-ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿರುವುದು ಅಸಮಂಜಸ ಎಂದು ವಿರೋಧ ವ್ಯಕ್ತಪಡಿಸಿದೆ.
579 ಮದ್ಯದಂಗಡಿಗಳ ಇ-ಹರಾಜು ಪ್ರಕ್ರಿಯೆಗೆ ಮುಂದಾದ ಸರ್ಕಾರ

ಈಗಾಗಲೇ ನಮ್ಮ ರಾಜ್ಯದಲ್ಲಿ 13,972 ಮದ್ಯದಂಗಡಿಗಳಿಗೆ ಪರವಾನಗಿ ನೀಡಲಾಗಿದೆ. ಈ ಸಂದರ್ಭದಲ್ಲಿ ಹೊಸದಾಗಿ 483 2ಎ ಹಾಗೂ 96 9ಎ ಸೇರಿ 579 ಮದ್ಯದಂಗಡಿಗಳಿಗೆ ಇ-ಹರಾಜು ಮುಖಾಂತರ ಲೈಸೆನ್ಸ್ ನೀಡಿ ಅಂದಾಜು 1,500 ಕೋಟಿ ರೂ. ಸಂಪನ್ಮೂಲ ಕ್ರೂಢೀಕರಿಸುವ ಉದ್ದೇಶದಿಂದ ಸರ್ಕಾರ ಇ-ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿರುವುದು ಸರಿಯಲ್ಲ ಎಂದು ಬಾರ್ ಮಾಲೀಕರ ಸಂಘ ಹೇಳಿದೆ. ಸಾರ್ವಜನಿಕರೂ ಕೂಡ, ಈಗಾಗಲೇ ಮದ್ಯದಂಗಡಿಗಳು ಎಲ್ಲೆಂದರಲ್ಲಿ ತಲೆ ಎತ್ತಿದ್ದು, ಮತ್ತಷ್ಟು ಏರಿಕೆಯಾಗುವುದು ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ ಎಂದಿದ್ದಾರೆ.

