ಬೆಂಗಳೂರು: ನಕ್ಸಲ್ ನಿಗ್ರಹ ಪಡೆ(ಎಎನ್‌ಎಫ್) ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲ್ ನಾಯಕ ವಿಕ್ರಮ್ ಗೌಡ ಹತ್ಯೆಯಾಗಿದ್ದು, ಆತ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಬುಧವಾರ ಹೇಳಿದ್ದಾರೆ.
ಎಎನ್‌ಎಫ್ ಗುಂಡು ಹಾರಿಸದಿದ್ದರೆ, ಆತ ಭದ್ರತಾ ಪಡೆ ಮೇಲೆ ಗುಂಡು ಹಾರಿಸುತ್ತಿದ್ದನು. ಹೀಗಾಗಿ ವಿಕ್ರಮ್ ಗೌಡನನ್ನು ಎನ್ ಕೌಂಟರ್ ಮಾಡಲಾಗಿದೆ ಎಂದ ಗೃಹ ಸಚಿವರು, ನಕ್ಸಲ್ ನಾಯಕನ ಹತ್ಯೆಗೆ ಸಂಬಂಧಿಸಿದ ಯಾವುದೇ ಅನುಮಾನಗಳನ್ನು ತಳ್ಳಹಾಕಿದರು ಮತ್ತು ತನಿಖೆ ಮಾಡಬೇಕು ಎಂಬ ಮನವಿಯನ್ನು ತಿರಸ್ಕರಿಸಿದರು.
“ವಿಕ್ರಮ್ ಗೌಡ ಮಾರಣಾಂತಿಕ ಆಯುಧವನ್ನು ಹೊಂದಿದ್ದನು. ಸ್ವಯಂಚಾಲಿತ ಮೆಷಿನ್ ಗನ್ ತರಹದ ಆಯುಧ ಹೊಂದಿದ್ದನು. ಎಎನ್‌ಎಫ್ ಸಿಬ್ಬಂದಿ ಆತನ ಮೇಲೆ ಗುಂಡು ಹಾರಿಸದಿದ್ದರೆ, ವಿಕ್ರಮ್ ಗೌಡ ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸುತ್ತಿದ್ದನು. ಆದ್ದರಿಂದ ಮೊದಲು ಆತನ ಮೇಲೆ ಗುಂಡು ಹಾರಿಸಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಹೀಗಾಗಿ ಯಾವುದೇ ಅನುಮಾನ ಪಡುವ ಅಗತ್ಯವಿಲ್ಲ ಎಂದು ಪರಮೇಶ್ವರ ಹೇಳಿದರು