ಬೆಂಗಳೂರು: ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಕಾಣುತ್ತಿದೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಅವರು ರಾಜ್ಯಪಾಲರಿಗೆ ನೀಡಿರುವ ದೂರಿನ ಆಧಾರ ಮೇಲೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ಖಚಿತ ಮಾಹಿತಿ ಸಿಕ್ಕಿದೆ.
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಇಬ್ಬರು ಕಾರ್ಯಕರ್ತರಿಂದ ದೂರುಗಳನ್ನು ಸ್ವೀಕರಿಸಿದ್ದಾರೆ, ಒಂದನ್ನು ಆರ್‌ಟಿಐ ಕಾರ್ಯಕರ್ತ ಟಿಜೆ ಅಬ್ರಹಾಂ ಮತ್ತು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಇತ್ತೀಚೆಗೆ ದೂರನ್ನು ಸಲ್ಲಿಸಿದ್ದಾರೆ. ಸಿದ್ದರಾಮಯ್ಯನವರು ಎಷ್ಟೇ ಸಮರ್ಥಿಸಿಕೊಂಡರೂ, ಕಾನೂನುಬದ್ಧವಾಗಿಯೇ ಪಡೆದಿದ್ದೇನೆ ಎಂದು ಹೇಳಿದರೂ ಕೂಡ ಮುಡಾದಿಂದ ಅವರ ಪತ್ನಿಗೆ ಹಂಚಿಕೆಯಾದ 14 ನಿವೇಶನಗಳಲ್ಲಿ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ಸ್ಪಷ್ಟವಾಗಿದೆ ಎಂದಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಸಿದ್ದರಾಮಯ್ಯನವರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ರಾತ್ರಿ ಕಾನೂನು ಸಲಹೆಗಾರ ಪೊನ್ನಣ್ಣ ಜೊತೆ ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿ ಚರ್ಚಿಸಿದ್ದರು. ಮುಂದಿನ ಕಾನೂನು ಹೋರಾಟದ ಕುರಿತು ಪೊನ್ನಣ್ಣ ಜೊತೆ ಮಾತನಾಡಿದ್ದರು. ಇದೀಗ ಕಾನೂನು ಹೋರಾಟಕ್ಕೆ ಅವರು ಮುಂದಾಗಿದ್ದಾರೆ.
ಅಬ್ರಹಾಂಗೆ ಕರೆ: ಅತ್ತ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುತ್ತಿದ್ದಂತೆ ಇತ್ತ ರಾಜ್ಯಪಾಲರ ಕಚೇರಿಯಿಂದ ಅಬ್ರಹಾಂಗೆ ಕರೆ ಹೋಗಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡುತ್ತೇನೆ, ನಾನು ಈಗ ಮಡಿಕೇರಿಯಲ್ಲಿದ್ದು ಬೆಂಗಳೂರಿಗೆ ಮಧ್ಯಾಹ್ನ ಬರುತ್ತೇನೆ ಎಂದು ಅಬ್ರಹಾಂ ಹೇಳಿದ್ದಾರೆ.
ಏನಿದು ಪ್ರಕರಣ?: ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರಿಗೆ 50-50 ಅನುಪಾತದಲ್ಲಿ 14 ಮೂಡಾ ಸೈಟ್‌ಗಳನ್ನ ಹಂಚಿಕೆ ಮಾಡಲಾಗಿದ್ದು, ಅದರಲ್ಲಿ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಎಂಬುವವರು ಇದರಲ್ಲಿ ಅಕ್ರಮ ಮಂಜೂರಾತಿ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಸಿಎಂ ಪತ್ನಿಗೆ 14 ನಿವೇಶನ ಮಂಜೂರಾದ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.
ದೇವನೂರು ಬಡಾವಣೆಯಲ್ಲಿ ಸಾವಿರಾರು ಸೈಟ್ ಇದ್ದರೂ ವಿಜಯನಗರದಲ್ಲಿ ಕೊಟ್ಟಿರುವುದು ಯಾಕೆ? ಇದು ಲಾಭದ ಉದ್ದೇಶ ಅಲ್ಲವೇ. ಈ ಹಿಂದಿನ ಮೂಡಾ ಆಯುಕ್ತ ನಟೇಶ್ ಈ ಆದೇಶ ಮಾಡಿದ್ದು, ಸಿಎಂ ಪತ್ನಿ ಆರ್ಥಿಕ ಲಾಭವನ್ನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.