ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ವಿಧೇಯಕಕ್ಕೆ ರಾಜ್ಯಪಾಲರ ಒಪ್ಪಿಗೆ

Ravi Talawar
ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ವಿಧೇಯಕಕ್ಕೆ ರಾಜ್ಯಪಾಲರ ಒಪ್ಪಿಗೆ
WhatsApp Group Join Now
Telegram Group Join Now

 ಕಾರ್ಮಿಕ ಇಲಾಖೆಯ ಮತ್ತೊಂದು ಮಹತ್ವದ ತೀರ್ಮಾನ ಜಾರಿ

ಬೆಂಗಳೂರು, ಸೆಪ್ಟೆಂಬರ್‌ 24: *ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಅಧಿನಿಯಮ 2024* ಕ್ಕೆ ರಾಜ್ಯಪಾಲರ ಅಂಕಿತ ದೊರೆತಿದ್ದು, ಕಾರ್ಮಿಕ ಇಲಾಖೆಯ ಮತ್ತೊಂದು ಮಹತ್ವದ ಕ್ರಮ ಜಾರಿಯಾಗಲಿದೆ. ಇದರಿಂದ ಸಿನಿಮಾ ಮತ್ತು ಇತರ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ದುಡಿಯುವ ಅಸಂಖ್ಯಾತ ಕಾರ್ಮಿಕರಿಗೆ ಅನುಕೂಲವಾಗಲಿದೆ.

ಈ ಮಸೂದೆಯನ್ನು ಇತ್ತೀಚೆಗೆ ನಡೆದ ವಿಧಾನ ಮಂಡಲ ಕಲಾಪದಲ್ಲಿ ಮಂಡಿಸಲಾಗಿತ್ತು. ಉಭಯ ಸದನಗಳ ಒಪ್ಪಿಗೆ ದೊರೆತಿದ್ದು, ಇದೀಗ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.

ಈ ಮಸೂದೆ ಜಾರಿಯಾಗುವುದರಲ್ಲಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಮಹತ್ವದ ಪಾತ್ರ ವಹಿಸಿದ್ದರು.

ಸಿನಿ ಮತ್ತು ಸಾಂಸ್ಕೃತಿಕ ರಂಗದಲ್ಲಿ ಕೆಲಸ ಮಾಡುವವರ ಕಲ್ಯಾಣಕ್ಕಾಗಿ ಕ್ಷೇಮಾಭಿವೃದ್ಧಿ ಮಂಡಳಿಯನ್ನು ರಚಿಸಿ ಅಮೂಲಕ ಅವರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ. ಈ ಮಂಡಳಿಗೆ ಕಾರ್ಮಿಕ ಸಚಿವರು ಅಧ್ಯಕ್ಷರಾಗಿದ್ದು, ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ ಕಾರ್ಮಿಕ ಇಲಾಖೆ ಇವರು ಉಪಾಧ್ಯಕ್ಷರಾಗಿರುತ್ತಾರೆ. ರಾಜ್ಯ ಸರ್ಕಾರವು ನಾಮ ನಿರ್ದೇಶಿಸುವ ಹದಿನೇಳು ಮಂದಿ ಸದಸ್ಯರಾಗಿರುತ್ತಾರೆ.

ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ನಿಧಿಯನ್ನು ಸ್ಥಾಪಿಸಲಾಗುತ್ತಿದ್ದು, ಇದರ ಮೂಲಕ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡಲಾಗುತ್ತದೆ.

“ಇದು ನಮ್ಮ ಇಲಾಖೆಯ ಮತ್ತೊಂದು ಕ್ರಾಂತಿಕಾರಕ ಕ್ರಮಗಳಲ್ಲಿ ಒಂದಾಗಿದೆ. ಈ ಮಸೂದೆಯಿಂದ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕುಟುಂಬಗಳಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಲಾಗುವುದು. ನಮ್ಮ ಇಲಾಖೆ ಈಗಾಗಲೇ ಇಂತಹ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಈಗ ಮತ್ತೊಂದು ಈ ಸಾಲಿಗೆ ಸೇರಿದೆ. ಈ ಮಸೂದೆ ಜಾರಿಯಾಗುವಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.”

ಸಂತೋಷ್‌ ಲಾಡ್‌, ಕಾರ್ಮಿಕ ಸಚಿವರು

WhatsApp Group Join Now
Telegram Group Join Now
Share This Article