ಬೆಂಗಳೂರು: ಬಡವರು, ಕೂಲಿ ಕಾರ್ಮಿಕರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಡಿಜಿಟಲ್ ಟಚ್ ನೀಡಲು ಸರ್ಕಾರ ಮುಂದಾಗಿದೆ. ಇಂದಿರಾ ಕ್ಯಾಂಟೀನ್‌ಗಳಿಗೆ ಡಿಜಿಟಲ್ ಟಚ್ ನೀಡುವ ಮೂಲಕ ಹೋಟೆಲ್-ರೆಸ್ಟೋರೆಂಟ್ ಗಳ ರೀತಿಯಲ್ಲಿಯೇ ಆರ್ಡರ್ ಗಳ ಪಡೆಯಲು ಚಿಂತನೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ಆದರೆ, ಸರ್ಕಾರ ಈ ಚಿಂತನೆಗೆ ನಾಗರೀಕರು ಹಾಗೂ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇದು ಮತ್ತೊಂದು ರೀತಿಯ ಹಗರಣ ಎಂದು ಕಿಡಿಕಾರಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ನಗರದಲ್ಲಿ 169 ಇಂದಿರಾ ಕ್ಯಾಂಟೀನ್‌ಗಳ (ಐಸಿ) ಪೈಕಿ 160 ಕ್ಯಾಂಟೀನ್ ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳುತ್ತಿದೆ. ಆದರೆ, ವಾಸ್ತವತೆ ವಿಭಿನ್ನವಾಗಿದೆ ಎಂದು ನಾಗರಿಕರು ಮತ್ತು ಕಾರ್ಯಕರ್ತರು ಹೇಳುತ್ತಿದ್ದಾರೆ.
ನಾಗರಭಾವಿ, ಬನ್ನೇರುಘಟ್ಟ ರಸ್ತೆ, ಕ್ವೀನ್ಸ್ ರಸ್ತೆ, ಮಾಗಡಿ ರಸ್ತೆ, ಜಯನಗರ 7ನೇ ಬ್ಲಾಕ್ ಸೇರಿದಂತೆ ಹಲವೆಡೆ ಇರುವ ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ ಹಾಕಲಾಗಿದೆ ಎಂದು ಹೇಳಿದ್ದಾರೆ.
ಬಿಬಿಎಂಪಿ ಅಧಿಕಾರಿಯೊಬ್ಬರು ಮಾತನಾಡಿ, ಇಂದಿರಾ ಕ್ಯಾಂಟೀನ್ ಗಳನ್ನು ಡಿಜಿಟಲೀಕರಣಗೊಳಿಸಲು ಶೀಘ್ರದಲ್ಲೇ ಟೆಂಡರ್‌ಗಳನ್ನು ಕರೆಯಲಾಗುವುದು ಎಂದು ಹೇಳಿದ್ದಾರೆ.