ಬೆಂಗಳೂರು, ಏಪ್ರಿಲ್ 27: ಸಿಇಟಿ ಪರೀಕ್ಷೆ ಗೊಂದಲ ಪರಿಶೀಲನೆಗೆ ನಾಲ್ವರು ಸದಸ್ಯರನ್ನೊಳಗೊಂಡ ತಜ್ಞರ ಸಮಿತಿಯನ್ನು ಸರ್ಕಾರ ಇತ್ತೀಚೆಗೆ ರಚಿಸಿತ್ತು. ಇದೀಗ ತಜ್ಞರ ಸಮಿತಿ ಸಿಇಟಿ ಪರೀಕ್ಷೆ ಗೊಂದಲ ಕುರಿತಾಗಿ ವರದಿ ಸಲ್ಲಿಸಿದೆ. ವರದಿ ಆಧರಿಸಿ ಮುಂದಿನ ವಾರ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಸಿಇಟಿ ಸಂಬಂಧ ಆಕ್ಷೇಪ ಸಲ್ಲಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳ ಆಕ್ಷೇಪ ಹಿನ್ನೆಲೆ ತಜ್ಞರ ವರದಿ ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.
ಏಪ್ರಿಲ್ 18 ಹಾಗೂ 19ರಂದು ಸಿಇಟಿ ಪರೀಕ್ಷೆ ನಡೆದಿತ್ತು. 4 ವಿಷಯಗಳಲ್ಲಿ ಕನಿಷ್ಠ 45 ಪ್ರಶ್ನೆಗಳು ಕೈಬಿಟ್ಟ ಪಠ್ಯದಿಂದ ಬಂದಿರುವುದಾಗಿ ಆರೋಪ ಮಾಡಲಾಗಿತ್ತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರದಲ್ಲಿ ಔಟ್ ಆಫ್ ಸಿಲೆಬಸ್ ಪ್ರಶ್ನೆ ಕೇಳಲಾಗಿತ್ತು. ಹೀಗಾಗಿ ಈ ಗೊಂದಲ ಪರಿಶೀಲನೆಗೆ ಸರ್ಕಾರ ನಾಲ್ವರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿತ್ತು.
ರಾಜ್ಯದಲ್ಲಿ 737 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಬೆಂಗಳೂರಿನಲ್ಲಿಯೇ 167 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿತ್ತು. 737 ವೀಕ್ಷಕರು, 737 ವಿಶೇಷ ಜಾಗೃತ ದಳದ ಸದಸ್ಯರು 737 ಪ್ರಶ್ನೆಪತ್ರಿಕಾ ಪಾಲಕರು, 14568 ಕೊಠಡಿ ಮೇಲ್ವಿಚಾರಕರು 20300 ಅಧಿಕಾರಿ ವರ್ಗದವರ ನಿಯೋಜನೆ ಮಾಡಲಾಗಿತ್ತು. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರ್ನರಿ, ಫಾರ್ಮಸಿ, ನ್ಯಾಚುರೋಪಥಿ ಮತ್ತು ಯೋಗ ಹಾಗೂ ಬಿ.ಎಸ್ಸಿ (ನರ್ಸಿಂಗ್) ಮುಂತಾದ ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ಸಿಇಟಿ ಪರೀಕ್ಷೆ ನಡೆದಿತ್ತು.
ಈ ವರ್ಷ 3,49637 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು. ಕಳೆದ ವರ್ಷಕ್ಕಿಂತ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು.
ಇನ್ನು ಸಾಮಾನ್ಯವಾಗಿ ಪ್ರತಿ ವರ್ಷ ಪರೀಕ್ಷೆ ವೇಳೆ ಮೂರು ಸೆಟ್ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಲಾಗುತ್ತದೆ. ಅದೇ ರೀತಿ 2023ನೇ ಸಾಲಿನಲ್ಲಿ ತಯಾರಿಸಿದ್ದ ಯಾವುದೋ ಒಂದು ಸೆಟ್ ಪ್ರಶ್ನೆ ಪತ್ರಿಕೆಯನ್ನೇ ಈ ಬಾರಿಯ ಪರೀಕ್ಷೆಗೂ ಪ್ರಾಧಿಕಾರ ನೀಡಿತ್ತು ಎಂಬ ಅನುಮಾನ ಕೂಡ ಮೂಡಿತ್ತು. ಅಲ್ಲದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ನಡುವೆ ಉಂಟಾದ ಸಂವಹನ ಕೊರತೆಯೂ ಒಂದು ಕಾರಣವಾಗಿದೆ ಎನ್ನಲಾಗಿದೆ.