ಬೆಂಗಳೂರು, ಜನವರಿ 7: ಹಿಮಾಚಲ ಪ್ರದೇಶ, ಕೇರಳ ಸರ್ಕಾರ ದಿವಾಳಿಯ ದಿಕ್ಕಿನಲ್ಲಿ ಹೋಗುತ್ತಿವೆ. ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೂ ದಿವಾಳಿಯತ್ತ ಹೆಜ್ಜೆ ಇಡುತ್ತಿದೆ ಎಂದು ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಟೀಕಿಸಿದರು. ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ 60 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ಮೊದಲು 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದರು, ಈಗ 60 ಪರ್ಸೆಂಟ್ ಕಮಿಷನ್ ಇದೆ. ಮುಂದೆ 65 ಪರ್ಸೆಂಟ್ ಪಡೆಯಬೇಕೆಂದು ಮಂತ್ರಿಮಂಡದಲ್ಲಿ ಚರ್ಚೆ ಆಗುತ್ತಿದೆ ಎಂದರು.
ಕಮಿಷನ್ಗಾಗಿ ಕಾಂಗ್ರೆಸ್ ಸರ್ಕಾರ ಇಡೀ ರಾಜ್ಯವನ್ನೇ ಕತ್ತಲೆಗೆ ದೂಡುತ್ತಿದೆ. ಹಿಟ್ನಾಳ್ ಹೇಳಿದರು, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಎಂದು. ವೋಟ್ ಹಾಕುವಾಗಲೂ ಅಡ್ಜಸ್ಟ್ ಮಾಡ್ಕೊಳ್ಳಿ ಅಂತ ಹೇಳಬೇಕಿತ್ತು. ಖರ್ಗೆಯವರೇ, ‘ಪಾಪರ್ ಮಾಡಿಬಿಡ್ತೀರಿ ನೀವು’ ಎಂದು ಕಾಂಗ್ರೆಸ್ನವರಿಗೆ ಹೇಳಿದ್ದಾರೆ. ರಾಜುಕಾಗೆ ದಿನನಿತ್ಯ ಕೂಗುತ್ತಿದ್ದಾರೆ. ಅಭಿವೃದ್ಧಿ ಕುಂಠಿತ ಆಗಿದೆ ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್ನವರು ಅಭಿವೃದ್ಧಿ ಆಗುತ್ತಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.