ಹಬ್ಬ ಬಂತೆಂದರೆ ಚಿನ್ನ ಖರೀದಿಸುವವರು ಈಗ ಹುಬ್ಬೇರಿಸುವಂತಾಗಿದೆ.ಕೇವಲ ಎರಡು ಮೂರು ವರ್ಷಗಳ ಹಿಂದಿದ್ದ ದರಕ್ಕಿಂತ ಅದು ಒಮ್ಮೆಲೇ ಮೂರು ಪಟ್ಟು ಏರಿ ಚಿನ್ನ ಪ್ರೀಯರನ್ನು ಬೆಚ್ಚಿಬೀಳಿಸುತ್ತಿದೆ.ಹೀಗಾಗಿ ಚಿನ್ನದ ಮೇಲೆ ಎಷ್ಟೇ ಪ್ರೀತಿಯಿದ್ದರೂ ಅದನ್ನು ಕೊಳ್ಳುವುದು ಮಾತ್ರ ದುರ್ಲಭವಾಗಿ ತೋರುತ್ತಿದೆ.
ಕಳೆದ 35 ವರ್ಷಗಳಲ್ಲಿ ಚಿನ್ನದ ದರದ ಏರಿಕೆಯನ್ನು ನೋಡಿದರೆ ಇತ್ತೀಚೆಗೆ ಅದು ವಿಪರೀತವಾಗಿ ಹೆಚ್ಚಿದ್ದನ್ನು ನಾವು ಗಮನಿಸಬಹುದು.
– 1991: 10 ಗ್ರಾಂ ಚಿನ್ನದ ಬೆಲೆ ₹3,466
– 2001: 10 ಗ್ರಾಂ ಚಿನ್ನದ ಬೆಲೆ ₹4,300
– 2011: 10 ಗ್ರಾಂ ಚಿನ್ನದ ಬೆಲೆ ₹26,400
– 2021: 10 ಗ್ರಾಂ ಚಿನ್ನದ ಬೆಲೆ ₹48,720
– 2026 (ಜನವರಿ): 10 ಗ್ರಾಂ ಚಿನ್ನದ ಬೆಲೆ ₹1,56,000 .(ಇಂದಿನ ದರ)
ಈ ಮೇಲಿನ ಅಂಕಿ ಸಂಖ್ಯೆಗಳನ್ನು ನೋಡಿದಾಗ 2001 ರಿಂದ 2011 ರ ಮಧ್ಯೆ ಕೇವಲ 10 ವರ್ಷಗಳಲ್ಲಿ ಚಿನ್ನದ ದರ 6 ಪಟ್ಟು ಹೆಚ್ಚಿದ್ದು ಅತೀ ದೊಡ್ಡ ಜಿಗಿತವಾಗಿತ್ತು.ಅದರ ನಂತರ 2021 ರಿಂದ 2026 ರ ವರೆಗೆ,ಅಂದರೆ 5 ವರ್ಷಗಳಲ್ಲಿ 3 ಪಟ್ಟಕ್ಕೂ ಹೆಚ್ಚು ಬೆಳೆದದ್ದು ಸಾರ್ವಕಾಲಿಕ ದಾಖಲೆ ಎನಿಸಿದೆ.

ಚಿನ್ನದ ದರ ಈ ಗರಿಷ್ಠ ಮಟ್ಟ ತಲುಪಿದ್ದು, ಜಾಗತಿಕ ಹಾಗು ರಾಜಕೀಯ ಅನಿಶ್ಚಿತತೆ, ಅಮೆರಿಕ ಮತ್ತು ಯುರೋಪ್ ನಡುವಿನ ವ್ಯಾಪಾರದ ಬಿಕ್ಕಟ್ಟು, ಮತ್ತು ಚಿನ್ನ ಒಂದು ಸುರಕ್ಷಿತ ಹೂಡಿಕೆಯ ಸಾಧನವೆನಿಸಿದ್ದೂ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ. 1.56 ಲಕ್ಷ ದಾಟಿದೆ. ಬೆಳ್ಳಿಯೂ ರೂ. 3.40 ಲಕ್ಷ/ಕೆಜಿ ಗಡಿ ದಾಟಿದೆ. ಈ ಏರಿಕೆಗೆ ತಜ್ಞರು ಹಲವಾರು ಕಾರಣಗಳನ್ನು ನೀಡುತ್ತಾರೆ.
ರಾಜಕೀಯ ಉದ್ವಿಗ್ನತೆ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗ್ರೀನ್ ಲ್ಯಾಂಡ್ ವಶಪಡಿಸಿಕೊಳ್ಳುವ ಕುರಿತು ಬೆದರಿಕೆ ಹಾಕಿದಾಗ ಯುರೋಪ್ ರಾಷ್ಟ್ರಗಳಲ್ಲಿ ಮೂಡಿದ ಆತಂಕದಿಂದಾಗಿ,ಜನ ತಮ್ಮ ಹೂಡಿಕೆಯನ್ನು ಹಣಕಾಸು ಸಂಸ್ಥೆಗಳ ಬದಲಿಗೆ ಚಿನ್ನವನ್ನು ಆರಿಸಿಕೊಳ್ಳುವಂತೆ ಮಾಡಿತು.
ಸುರಕ್ಷಿತ ಹೂಡಿಕೆಯ ಬೇಡಿಕೆ: ಆರ್ಥಿಕ ಮತ್ತು ರಾಜಕೀಯ ಅನಿಶ್ಚಿತತೆಯ ನಡುವೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಪರಿಗಣಿಸುತ್ತಿದ್ದಾರೆ
ಡಾಲರ್ ದುರ್ಬಲತೆ: ದುರ್ಬಲ ಡಾಲರ್ ಚಿನ್ನದ ಬೆಲೆ ಏರಿಕೆಗೆ ಮತ್ತಷ್ಟು ಕಾರಣವಾಗಿದೆ.
ಅಮೆರಿಕದ ಫೆಡ್ ರೇಟ್ ಕಡಿತದ ನಿರೀಕ್ಷೆ: ಅಮೆರಿಕ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತಗೊಳಿಸುವ ನಿರೀಕ್ಷೆಗಳು ಸಹ ಚಿನ್ನದ ಬೆಲೆ ಏರಿಕೆಗೆ ಬೆಂಬಲ ನೀಡುತ್ತಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರುತ್ತಿರುವುದು ದೇಶೀ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಚಿನ್ನ-ಬೆಳ್ಳಿ ಮಾರುಕಟ್ಟೆ ತಜ್ಞರು ಅಭಿಪ್ರಾಯಪಡುತ್ತಾರೆ. ಆದರೆ, ಅಮೆರಿಕದ ಆರ್ಥಿಕತೆ ಬಲಗೊಂಡರೆ ಚಿನ್ನ ಶೇ 5-20ರಷ್ಟು ಅಗ್ಗವಾಗಬಹುದು ಎಂದೂ ವಿಶ್ವ ಚಿನ್ನದ ಆಯೋಗ ತಿಳಿಸಿದೆ.
ಒಟ್ಟಿನಲ್ಲಿ ಚಿನ್ನದ ದರ ಭವಿಷ್ಯದಲ್ಲಿ ಎಷ್ಟು ಇಳಿತ ಕಂಡರೂ ಬಡವರ ಪಾಲಿಗೆ ಮಾತ್ರ ನಿಲುಕದ ನಕ್ಷತ್ರವೇ ಆಗಿ ಪರಿಣಮಿಸಲಿದೆ. ಭಾರತೀಯ ಸಂಸ್ಕೃತಿಯಲ್ಲಿ ಚಿನ್ನಕ್ಕೆ ಅದರದೇ ಆದ ಮಹತ್ವವಿದ್ದು ಮದುವೆಯಂತಹ ಕಾರ್ಯಗಳಲ್ಲಿ ಕನಿಷ್ಠ ತಾಳಿಯನ್ನಾದರೂ ಚಿನ್ನದಲ್ಲಿಯೇ ಮಾಡಿಸಲಾಗುತ್ತದೆ.ಈಗ ಅದು ಬಡವರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಆದ್ದರಿಂದ ಅದಕ್ಕೆ ಪರ್ಯಾಯವಾಗಿ ಅಭರಣಗಳಿಗಾಗಿಯೇ
ಕಡಿಮೆ ಕ್ಯಾರಟ್ಟಿನ ಚಿನ್ನವನ್ನು ಮಾರುಕಟ್ಟೆಗೆ ಬಿಡುವ ಯೋಜನೆ ಇದ್ದು ಅದು ಆದಷ್ಟು ಬೇಗ ಎಲ್ಲೆಡೆ ದೊರಕುವಂತಾದರೆ ಆಗಲಾದರೂ ಒಬ್ಬ ಸಾಮಾನ್ಯ ಪ್ರಜೆ ಸ್ವಲ್ಪ ನಿಟ್ಟುಸಿರು ಬಿಡಬಹುದೇನೋ ಎನ್ನಿಸುತ್ತಿದೆ.
– ರಾಜಶೇಖರ ಕೋಟಿ
ಚ,ಕಿತ್ತೂರು.


