ಬಳ್ಳಾರಿ ಮೇ 02.. ಭಾರತ ಸರ್ಕಾರದ ಅಂಚೆ ಇಲಾಖೆ “ಜ್ಞಾನ ಪೋಸ್ಟ್” ಎಂಬ ಹೆಸರಿನ ಹೊಸ ಅಂಚೆ ಸೇವೆಯನ್ನು 1 ಮೇ 2025 ರಿಂದ ಪ್ರಾರಂಭಿಸಿದೆ. ಇದು ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷಾ ಆಸಕ್ತರು ಮತ್ತು ಸಮಾಜ-ಸಂಸ್ಕೃತಿ- ಧಾರ್ಮಿಕ ಸಂಬಂಧಿತ ಸಾಹಿತ್ಯವನ್ನು ತಲುಪಿಸಲು ಬಳಸಬಹುದಾದ ಕೈಗೆಟುಕುವ ದರದಲ್ಲಿ ಸಿಗುವ ವಿಶೇಷ ಅಂಚೆ ರವಾನೆ ಸೇವೆ ಯಾಗಿದೆ ಎಂದು ಈ ಸೇವೆಯನ್ನು ಬಳ್ಳಾರಿ ಪ್ರಧಾನ ಅಂಚೆ ಕಚೇರಿಯಲ್ಲಿ ಉದ್ಘಾಟಿಸಿದ ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರಾದ ಪದ್ಮಶಾಲಿ ಚಿದಾನಂದ ಅವರು ತಿಳಿಸಿದರು.
ಜ್ಞಾನ ಪೋಸ್ಟ್‌ನ ಮುಖ್ಯ ಲಕ್ಷಣಗಳು:-ಪಠ್ಯಪುಸ್ತಕಗಳು, ಶಾಸ್ತ್ರೀಯ/ಸಾಂಸ್ಕೃತಿಕ/ಧಾರ್ಮಿಕ ಪುಸ್ತಕಗಳು, ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿತ ಪುಸ್ತಕಗಳನ್ನು ಮಾತ್ರ ಕಳುಹಿಸಬಹುದಾಗಿದೆ ಕೇವಲ ಮುದ್ರಿತ ಪುಸ್ತಕಗಳು (ಮ್ಯಾಗಜೀನು, ಜರ್ನಲ್ ಅಲ್ಲ) ಪಾರ್ಸೆಲ್ ನ ಹೊರಭಾಗದಲ್ಲಿ “Gyan Post” ಎಂದು ನಮೋದಿಸಿರಬೇಕು. ಕನಿಷ್ಠ ತೂಕ 300 ಗ್ರಾಂ ಮತ್ತು ಗರಿಷ್ಟ 5 ಕೆಜಿ ವರೆಗೂ ಕಳುಹಿಸಬಹುದು.
ಸ್ಪೀಡ್ ಪೋಸ್ಟ್ ಮತ್ತು ನೋಂದಾಯಿತ ಅಂಚೆಯಂತೆ ಇದು ಸಹ ಬುಕ್ ಮಾಡಿದಾಗಿನಿಂದ ವಿಳಾಸಕ್ಕೆ ತಲುಪುವವರೆಗೂ online ನಲ್ಲಿ ಟ್ರ್ಯಾಕ್ ಮಾಡಬಹುದು. (ಪಾರ್ಸೆಲ್ ಟ್ರ್ಯಾಕಬಲ್ ಆಗಿದ್ದು ಸಾಮಾನ್ಯ ಅಂಚೆಯಾಗಿ ಕಳುಹಿಸಲು ಅನುಮತಿ ಇಲ್ಲ). ಕಳುಹಿಸುವವರು ಮತ್ತು ಸ್ವೀಕರಿಸುವವರ ವಿಳಾಸ ಸ್ಪಷ್ಟವಾಗಿ ಇರಬೇಕು. ಸೇವಾ ಶುಲ್ಕದ ಉಲ್ಲೇಖ:300 ಗ್ರಾಂವರೆಗೆ – ₹20, 301 ರಿಂದ 500 ಗ್ರಾಂ – ₹25, 501 ರಿಂದ 1000 ಗ್ರಾಂ – ₹35, ಗರಿಷ್ಟ 5000 ಗ್ರಾಂವರೆಗೆ ₹100.
ಈ ಸೇವೆ ಯಲ್ಲಿ ನೋಂದಣಿ, ತಲುಪಿದ್ದಕ್ಕೆ ಪುರಾವೆ ಹಾಗೂ ವಿಮಾ ಸೇವೆಗಳನ್ನು ಹೆಚ್ಚುವರಿ ಶುಲ್ಕದೊಂದಿಗೆ ಪಡೆಯಬಹುದು.ಇದು ವಿದ್ಯಾರ್ಥಿಗಳು, ಓದುಗರು ಮತ್ತು ಪಠ್ಯಪುಸ್ತಕ ಪ್ರಕಾಶಕರುಗಳಿಗೆ ಉಪಯುಕ್ತವಾಗುವಂತೆ ರೂಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಕೋರಿದರು. ಈ ಸೇವೆಗೆ ಬಳ್ಳಾರಿ ಪ್ರಧಾನ ಅಂಚೆ ಕಚೇರಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಿಷ್ಟಿ ರುದ್ರಪ್ಪ ಅವರು ಒಂದು ಪುಸ್ತಕವನ್ನು ರವಾನಿಸುವ ಮುಖಾಂತರ ಮೊದಲ ಗ್ರಾಹಕರಾದರು.
ಈ ಕಾರ್ಯಕ್ರಮದಲ್ಲಿ ಪ್ರಧಾನ ಅಂಚೆ ಪಾಲಕರಾದ ಏ ಜೆ ಭೀಮಸೇನ್, ಮಾರುಕಟ್ಟೆ ಅಧಿಕಾರಿ ಹನುಮಂತರೆಡ್ಡಿ ಮತ್ತು ಕಚೇರಿಯ ಸಹಾಯಕರಾದ ಅಲ್ಲಾಸಾಬ್ ಹಾಗೂ ಕಚೇರಿಯ ಸಿಬ್ಬಂದಿಗಳು ಹಾಜರಿದ್ದರು.