ಬೆಂಗಳೂರು, ಅಕ್ಟೋಬರ್ 10: ಹೋರಾಟಗಾರ ಗಿರೀಶ್ ಮಟ್ಟಣ್ಣವರ್ ಈ ಹಿಂದೆ ವಿಧಾನಸೌಧದ ಬಳಿ ಬಾಂಬ್ ಇಟ್ಟಿದ್ದ ಆರೋಪ ನ್ಯಾಯಾಲಯದಲ್ಲಿ ಖುಲಾಸೆಯಾಗಿತ್ತು. ಆದರೆ, ಇದೀಗ ಆ ಪ್ರಕರಣವನ್ನು ಮತ್ತೆ ತನಿಖೆಗೆ ಒಳಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹಾಗೂ ಗೃಹ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ. ವಿಧಾನಸೌಧದ ಬಳಿ ಬಾಂಬ್ ಇಟ್ಟಿದ್ದ ಕೇಸ್ (ಕ್ರೈಂ ನಂ. 243/2005) ಅನ್ನು ಪುನರ್ತೆರೆದು ತನಿಖೆ ನಡೆಸಬೇಕು. ಜತೆಗೆ, ಎನ್ಐಎ ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತಾವೇ ಬಾಂಬ್ ತಯಾರಿಸಿ ಇಟ್ಟಿರುವುದಾಗಿ ಒಪ್ಪಿಕೊಂಡಿರುವ ರೀತಿಯಲ್ಲಿ ಗಿರೀಶ್ ಮಟ್ಟಣ್ಣವರ್ ಹಲವಾರು ವಿಡಿಯೋಗಳಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ತಾವೇ ಬಾಂಬ್ ತಯಾರಿಸಿ ಇಟ್ಟಿರುವುದಾಗಿ ಒಪ್ಪಿಕೊಂಡಿರುವ ರೀತಿಯ ಹೇಳಿಕೆ ನೀಡಿದ್ದಾರೆ. ಅವರು ಆ ರೀತಿಯ ಹೇಳಿಕೆ ನೀಡಿರುವುದು ಸ್ಪಷ್ಟವಾಗಿದೆ. ಹೀಗಾಗಿ, ಕೇಸ್ ಈಗಾಗಲೇ ಕೋರ್ಟ್ನಲ್ಲಿ ಖುಲಾಸೆಯಾಗಿದ್ದರೂ, ಹೊಸ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಪುನಃ ತನಿಖೆ ನಡೆಸುವ ಅಗತ್ಯವಿದೆ ಎಂದು ಪ್ರಶಾಂತ್ ಸಂಬರಗಿ ದೂರಿನಲ್ಲಿ ಹೇಳಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಕೇಸ್ ತನಿಖೆ ವೇಳೆ, ದಾಳಿಕೋರರ ಟಾರ್ಗೆಟ್ ಧರ್ಮಸ್ಥಳ ಆಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಸದ್ಯ ಗಿರೀಶ್ ಮಟ್ಟಣ್ಣವರ್ ಕೂಡ ಧರ್ಮಸ್ಥಳ ವಿರುದ್ಧದ ಷಡ್ಯಂತ್ರದಲ್ಲಿ ಸಕ್ರಿಯವಾಗಿದ್ದಾರೆ. ಹೀಗಾಗಿ ಈ ಎರಡು ಪ್ರಕರಣಗಳ ನಡುವೆ ಲಿಂಕ್ ಇದೆಯೇ ಎಂಬುದನ್ನು ತನಿಖೆ ನಡೆಸಬೇಕಿದೆ ಎಂದು ಪ್ರಶಾಂತ್ ಸಂಬರಗಿ ಉಲ್ಲೇಖಿಸಿದ್ದಾರೆ.


