ಬಳ್ಳಾರಿ. ಅ. 28 : ವಿದ್ಯಾರ್ಥಿಗಳಿಗೆ ಇಂತಹ ವೇದಿಕೆಗಳು ತಮ್ಮ ಪ್ರತಿಭೆ ಮತ್ತು ಆತ್ಮವಿಶ್ವಾಸ ಪ್ರದರ್ಶಿಸಲು ಉತ್ತಮ ಅವಕಾಶ. ಶಾಲೆ ಮತ್ತು ಪೋಷಕರು ವಿದ್ಯಾರ್ಥಿಗಳನ್ನು ಇಂತಹ ಶೈಕ್ಷಣಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ಪ್ರೋತ್ಸಾಹಿಸಬೇಕು. ಇದು ಸಮಾಜದ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ,” ಎಂದು ಆರ್ಎಸ್ಬಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪೋಲಾ ರಾಧಾಕೃಷ್ಣ ಅಭಿಪ್ರಾಯ ಪಟ್ಟರು
ಅವರು ನಗರದ ಶ್ರೀ ವಾಸವಿ ವಿದ್ಯಾಲಯದಲ್ಲಿ ಆರ್ಎಸ್ಬಿ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿ ಮೂರನೇ ಬಾರಿಗೆ ಉಚಿತ ಸಾಮಾನ್ಯ ಜ್ಞಾನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಂಡ ವಿದ್ಯರ್ಥಿಗಳು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.
ಈ ಸ್ಪರ್ಧೆಯಲ್ಲಿ ಬಳ್ಳಾರಿ ನಗರ ಮತ್ತು ಸುತ್ತಮುತ್ತಲಿನ 58 ಶಾಲೆಗಳ 1020 ವಿದ್ಯಾರ್ಥಿಗಳು ಭಾಗವಹಿಸಿದ್ದರು.
5ನೇ ತರಗತಿಯಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಸ್ಪರ್ಧೆಯಲ್ಲಿ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ ಎಂಬ 50 ಪ್ರಶ್ನೆಗಳಿದ್ದು,ಇಂಗ್ಲಿಷ್ ವ್ಯಾಕರಣ, ಕನ್ನಡ ವ್ಯಾಕರಣ, ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳ ಪಠ್ಯಮಟ್ಟದ ತಿಳುವಳಿಕೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಪರೀಕ್ಷಿಸಲಾಯಿತು ಮತ್ತು ಈ ಪರೀಕ್ಷೆಯು ಪಾರದರ್ಶಕವಾಗಿದ್ದು, ಫಲಿತಾಂಶದ ನಂತರ ಎಲ್ಲಾ ಉತ್ತರ ಪತ್ರಿಕೆಗಳನ್ನು ಆಯಾ ಶಾಲೆಗಳಿಗೆ ಹಿಂದಿರುಗಿಸಲಾಗುವುದು.
ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ಜ್ಞಾನಾಭಿವೃದ್ಧಿ, ಆತ್ಮವಿಶ್ವಾಸ ಮತ್ತು ಚಿಂತನಾ ಶಕ್ತಿಯನ್ನು ವೃದ್ಧಿಗೊಳಿಸುವ ಉದ್ದೇಶದಿಂದ ಆಯೋಜಿಸಲಾಗಿತ್ತು. ಪ್ರತಿ ತರಗತಿಗೆ ಪ್ರತ್ಯೇಕ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗಿದ್ದು, ಪರೀಕ್ಷೆ ಶಿಸ್ತಿನಿಂದ ನಡೆಯಿತು.
ಪರೀಕ್ಷಾ ಸಮಯದಲ್ಲಿ ಶಾಲೆಗಳ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
ಶ್ರೀ ವಾಸವಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಪಿ ಎನ್ ಸುರೇಶ್ ಮಾತನಾಡಿ, “ವಿದ್ಯಾರ್ಥಿಗಳ ಬೌದ್ಧಿಕ ಅಭಿವೃದ್ಧಿಯ ಜೊತೆಗೆ ವ್ಯಕ್ತಿತ್ವ ವಿಕಾಸಕ್ಕೂ ಇಂತಹ ಸ್ಪರ್ಧೆಗಳು ಮೂಲಾಧಾರವಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಜ್ಞಾನವನ್ನು ಆಯುಧವನ್ನಾಗಿ ಮಾಡಿಕೊಂಡು ಮುಂದಿನ ಪೀಳಿಗೆಯ ಪ್ರಗತಿಗೆ ಕಾರಣರಾಗಬೇಕು,” ಎಂದು ಸಂತೋಷ ವ್ಯಕ್ತಪಡಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ವೀರೇಶ್ ಯು ಮಾತನಾಡಿ, “ಈ ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಮರ್ಥ್ಯವನ್ನು ಪರಿಶೀಲಿಸುವ ಅವಕಾಶ ಪಡೆದಿದ್ದಾರೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸ್ಪರ್ಧಾತ್ಮಕ ಚಿಂತನೆ, ಆತ್ಮವಿಶ್ವಾಸ ಹಾಗೂ ಸಮಯ ನಿರ್ವಹಣಾ ಶಕ್ತಿ ಬೆಳೆಸಲು ಸಹಾಯಕವಾಗಿವೆ. ಶಾಲೆಗಳು ಈ ರೀತಿಯ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು” ಎಂದರು.
ಶ್ರೀ ವಾಸವಿ ವಿದ್ಯಾಲಯದಿಂದ ಸ್ವಂತ ರಚಿತವಾದ “ಮಾನವನ ಜನನ ಹಾಗೂ DNA ರಚನೆ” ಕುರಿತಾಗಿ ಆಕರ್ಷಕವಾದ ಶೈಕ್ಷಣಿಕ ವೀಡಿಯೊ ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಆಯೋಜಕರು ಮುಂದಿನ ವರ್ಷ ಸ್ಪರ್ಧೆಯ ಸ್ವರೂಪವನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ವೀರೇಶ್ ತಿಳಿಸಿದರು.


