ಗಾಜಾ: ಇಸ್ರೇಲಿ ಸೇನೆಯು ಏಳು ದಿನಗಳಲ್ಲಿ ನುಸೇರಾತ್ನ ಕೇಂದ್ರ ಗಾಜಾ ನಿರಾಶ್ರಿತರ ಶಿಬಿರದ ಮೇಲೆ 63 ಬಾರಿ ಬಾಂಬ್ ದಾಳಿ ನಡೆಸಿದ್ದು, 91 ಪ್ಯಾಲೆಸ್ಟೈನಿಯರು ಮೃತಪಟ್ಟು, 251 ಮಂದಿ ಗಾಯಗೊಂಡಿದ್ದಾರೆ ಎಂದು ಹಮಾಸ್ ಅಧೀನದಲ್ಲಿರುವ ಗಾಜಾ ಸರಕಾರಿ ಮಾಧ್ಯಮ ಕಚೇರಿ ತಿಳಿಸಿದೆ.
ಇತ್ತೀಚೆಗೆ ಸ್ಥಳಾಂತರಗೊಂಡವರು ಸೇರಿದಂತೆ ಸುಮಾರು 2,50,000 ಜನರನ್ನು ಹೊಂದಿರುವ ನಿರಾಶ್ರಿತರ ಶಿಬಿರದಲ್ಲಿ ನಡೆಯುತ್ತಿರುವ ಹತ್ಯೆಗಳಿಗೆ ಇಸ್ರೇಲ್ ಮತ್ತು ಯುಎಸ್ ಆಡಳಿತಗಳೇ ಸಂಪೂರ್ಣ ಹೊಣೆ ಎಂದು ಗಾಜಾ ಆಡಳಿತಾರೂಢ ಬಣ ಭಾನುವಾರ ಹೇಳಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಯುಎನ್ಆರ್ಡಬ್ಲ್ಯೂಎ ಸ್ಥಾಪಿಸಿದ ಶಾಲೆಯ ಮೇಲೆ ಮಂಗಳವಾರ ನಡೆದ ರಾಕೆಟ್ ದಾಳಿಯೊಂದರಲ್ಲಿ ಕನಿಷ್ಠ 23 ಜನ ಸಾವಿಗೀಡಾಗಿದ್ದು, 73 ಜನ ಗಾಯಗೊಂಡ ಘಟನೆಯ ನಂತರ ಗಾಜಾದಲ್ಲಿ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಆದರೆ ಆ ಸ್ಥಳದಲ್ಲಿ ಸಕ್ರಿಯ ಭಯೋತ್ಪಾದಕರು ಇರುವ ಬಗ್ಗೆ ನಿಖರ ಗುಪ್ತಚರ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ದಾಳಿಯನ್ನು ಸಮರ್ಥಿಸಿಕೊಂಡಿದೆ.
ಕಳೆದ 24 ಗಂಟೆಗಳಲ್ಲಿ, ಇಸ್ರೇಲ್ ಮಿಲಿಟರಿಯ ದಾಳಿಯಲ್ಲಿ 64 ಜನ ಸಾವಿಗೀಡಾಗಿದ್ದು, 105 ಜನ ಗಾಯಗೊಂಡಿದ್ದಾರೆ. ಕಳೆದ ಅಕ್ಟೋಬರ್ನಲ್ಲಿ ಪ್ಯಾಲೆಸ್ಟೈನ್-ಇಸ್ರೇಲ್ ಸಂಘರ್ಷ ಪ್ರಾರಂಭವಾದಾಗಿನಿಂದ ಒಟ್ಟು ಸಾವಿನ ಸಂಖ್ಯೆ 38,983 ಕ್ಕೆ ಮತ್ತು ಗಾಯಗೊಂಡವರ ಸಂಖ್ಯೆ 89,727 ಕ್ಕೆ ತಲುಪಿದೆ ಎಂದು ಗಾಜಾ ಮೂಲದ ಆರೋಗ್ಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.