ಈವತ್ತು ‘ವಿಶ್ವ ವಿಶೇಷ ಚೇತನರ ದಿನ’ ಅಂತ ಗೆಳೆಯ ನದೀಮ್ ನೆನಪಿಸಿದರು. ಕೇವಲ ‘ನಾನು’ ‘ನನ್ನದು’ ಅಂತ ಬದುಕುವ ಸ್ವಾರ್ಥ ಸಮಾಜದಲ್ಲಿ ನನ್ನಂತೆ ಇತರರು ಅವರಿಗಾಗಿ ನಾನು ಅಂತ ಬದುಕೋರ ಸಂಖ್ಯೆ ತೀರ ವಿರಳ. ಹುಟ್ಟಿನೊಂದಿಗೆ ಗಾಯಗಳನ್ನೆ ಹಾಸಿ ಗಾಯಗಳನ್ನೇ ಹೊದ್ದು ಮನೆಯವರು ಇವಳು ಬದುಕು ಮುಗೀತು ಅಂತನ್ನಿಸಿ ಕೈ ಚೆಲ್ಲಿದಾಗ ಮತ್ತೆ ಮೈ ಕೊಡವಿ ಎದ್ದು ಚೇತರಿಸಿಕೊಂಡು ಬದುಕು ಇನ್ನೂ ಇದೆ ಅಂತ ಆತ್ಮವಿಶ್ವಾಸದಿಂದಲೇ ಬದುಕಿದ ಮತ್ತು ಇನ್ನೂ ಗಾಯಗಳಲ್ಲೇ ಬದುಕುತ್ತಿರುವ ‘ಗಾಯ’ತ್ರಿಯ ಕಥೆ ಹೇಳಿದರು.

ಅವರ ಬದುಕಿನ ಹಲವು ಗಾಯಗಳ ನಡುವೆಯೂ ಅವರು ಧೃತಿಗೆಡದೇ ತನ್ನಂತೆ ಸಮಾಜದ ವಿವಿಧ ರೀತಿಯ ಅಂಗವೈಕಲ್ಯತೆಯಿಂದ ಬಳಲುತ್ತಿರುವ ಮಕ್ಕಳಿಗಾಗಿ ತಮ್ಮ ಪತಿಯ ನೆರವಿನಿಂದ ಟೊಂಕ ಕಟ್ಟಿ ನಿಂತು ‘ಅಂಕುರ್ ವಿಶೇಷ ಚೇತನ ಮಕ್ಕಳ ಶಾಲೆ’ ತೆರೆದ ಅಪರೂಪದ ಸಾಧಕ ಮಹಿಳೆಯ ಕಥೆ ಇಲ್ಲಿದೆ.
ಮೂಲ ಕಾರವಾರದ ಗಾಯತ್ರಿ ಹುಟ್ಟಿದ್ದು 1977 ಜುಲೈ 14 ರಂದು. ಬಾಲ್ಯದಲ್ಲೇ ಹರ್ನಿಯಾದಿಂದ ಬಳಲಿದ ಇವರು ಬೆಳಗಾವಿಯಲ್ಲಿನ ಅವರ ಅತ್ತೆಯವರು ಕೊಡಿಸಿದ ಚಿಕಿತ್ಸೆ ಕಾರಣ ಗುಣಮುಖರಾದರು.
ಕಾರವಾರದ ಸೇಂಟ್ ಮೈಕೆಲ್ಸ್ ಕಾನ್ವೆಂಟ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಪ್ರತಿಷ್ಠಿತ ದಿವೇಕರ ಕಾಲೇಜಿನಲ್ಲಿ ಪದವಿ ಪಡೆದ ಇವರು1999 ರ ಡಿಸೆಂಬರ್‌ನಲ್ಲಿ ಬೆಳಗಾವಿಯ ಶ್ರೀ ಯತಿನ್ ಗಾವಡೆ ಅವರೊಂದಿಗೆ ವಿವಾಹವಾದರು.
ವರ್ಷ ಕಳೆಯುವುದರಲ್ಲೇ ಒಂದು ರಾತ್ರಿ ಮಲಗಿದ ಗಾಯತ್ರಿ, ಬೆಳಿಗ್ಗೆ ಎಂದಿನಂತೆ ಏಳಲು ಸಾಧ್ಯವಾಗಲಿಲ್ಲ ವೈದ್ಯರು ಇದನ್ನು ಜಿ.ಬಿ. ಸಿಂಡ್ರೋಮ್ (Guillain-Barré Syndrome) ಅಂತ ಕರೆದು ಶಾಶ್ವತ ಪರಿಹಾರ ಇಲ್ಲ ಅಂತ ಕೈ ಚೆಲ್ಲಿದರು.
ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವಾಗಲೇ ಉಸಿರಾಟ ಬಿಗಿಯಾಯಿತು ವೆಂಟಿಲೇಟರ್ ಹಾಕಿಯೂ ಸ್ಥಿತಿ ಗಂಭೀರವಾದಾಗ ವೈದ್ಯರ ಡಯಾಗ್ನೋಸ್ಟಿಕ್ ಸೆಂಟರ್‌ಗೆ ಕರೆದೊಯ್ದು, ಶಾಕ್ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಗಾಯತ್ರಿ ಕುಸಿದರು. ತಂದೆ, ತಾಯಿ ಕಣ್ಣೀರು ಹಾಕುತ್ತಿದ್ದರೂ ತಮ್ಮನ್ನು ತಾವು ಸ್ಥಿಮಿತಕ್ಕೆ ತಂದು, ಅಚಲ ನಂಬಿಕೆಯೊಂದಿಗೆ ಪ್ರಾರ್ಥನೆ ಮೊರೆ ಹೋದ ಅವರ ಪ್ರಯತ್ನ ಚಮತ್ಕಾರ ಮಾಡಿತ್ತು. ನಿಧಾನವಾಗಿ ಪವಾಡ ಸದೃಶ ಎಂಬಂತೆ ವ್ಯಾಯಾಮ ಮಸಾಜ್ ಮೂಲಕ ಗುಣಮುಖರಾದರು.
ಕೇವಲ ದೈಹಿಕವಾಗಿ ಬಾಧಿತಳಾದ ನನಗೆ ಇಷ್ಟು ಕಷ್ಟ ಆದರೆ ದೈಹಿಕ ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುವವರ ಸ್ಥಿತಿ ಹೇಗಿರಬೇಡ? ಅಂತ ಆಲೋಚನೆ ಮಾಡಿ ಅಂತವರಿಗಾಗಿ ಏನಾದರೂ ಮಾಡಬೇಕು ಅಂತ ಹಠ ತೊಟ್ಟರು.ಈ ನಡುವೆ ಮತ್ತೇ ಮತ್ತೇ ಅವರ ಬದುಕಲ್ಲಿ ಹತ್ತು ಹಲವು ಆರೋಗ್ಯದ ಸಮಸ್ಯೆ ಬಂದರೂ ಎದೆಗುಂದದೇ ಪತಿಯ ನೆರವಿನಿಂದ ಇವೆಂಟ್ ಮ್ಯಾನೇಜಮೆಂಟ್ ನಲ್ಲಿ ತೊಡಗಿದರು. ಇದರಿಂದ ಸಮಾಧಾನ ಆಗದ ಅವರು ವಿಶೇಷ ಚೇತನ ಮಕ್ಕಳಿಗಾಗಿ ಒಂದು ಶಾಲೆ ತೆರೆದರೆ ಹೇಗೆ? ಅಂತ ಯೋಚನೆ ಮಾಡಿ 2010-11 ರಲ್ಲಿ ಐದು ಮಕ್ಕಳೊಂದಿಗೆ ‘ಅಂಕುರ್’ ವಿಶೇಷ ಚೇತನ ಮಕ್ಕಳ ಶಾಲೆ’ ಆರಂಭಿಸಿದರು.ಇಂದು ಆ ಶಾಲೆಯಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳು ದಾಖಲಾಗಿದ್ದಾರೆ. ಪ್ರತಿ ಮಗುವನ್ನು ತನ್ನದೇ ಮಗು ಎಂಬಂತೆ ಶಾಲೆಯ ಸಿಬ್ಬಂದಿಗಳು ಆರೈಕೆ ಮಾಡುತ್ತಾರೆ.
ತನ್ನದೇ ಹತ್ತು ಹಲವು ಗಾಯಗಳು ಸುಡುವ ಕೆಂಡದಂತಿದ್ದ ರೂಂ ಸಮಾಜದ ವಿಶೇಷ ಚೇತನ ಮಕ್ಕಳ ಆರೈಕೆಯಲ್ಲಿ ತಲ್ಲೀಣರಾದ ಗಾಯತ್ರಿಯವರ ಬದುಕು ಯಾವ ಸಾಧನೆಗೂ ಕಡಿಮೆ ಇಲ್ಲ. ಇಷ್ಟೆಲ್ಲಾ ಸಾಧನೆಗೈದ ನಮ್ಮ ನಡುವಿನ ಇಂತಹ ಅಪರೂಪದ ಸಾಧಕಿಗೆ ಇಂದಿನ ‘ವಿಶ್ವ ವಿಶೇಷ ಚೇತನರ ದಿನ’ದಂದು ನಮ್ಮದೊಂದು ಸೆಲ್ಯೂಟ್ ಇರಲಿ.
•ಸಿದ್ದರಾಮ ತಳವಾರ


