ಬೆಂಗಳೂರು, ಜುಲೈ 16: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಎ5 ಅಮಿತ್ ದಿಗ್ವೇಕರ್, ಎ17 ಕೆ.ಟಿ.ನವೀನ್ ಕುಮಾರ್, ಎ7 ಹೆಚ್.ಎಲ್.ಸುರೇಶ್ಗೆ ಜಾಮೀನು ನೀಡಿ ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.
ಆರೋಪಿಗಳ ಪರ ಅರುಣ್ ಶ್ಯಾಮ್, ಮಧುಕರ್ ದೇಶಪಾಂಡೆ, ಬಸವರಾಜ ಸಪ್ಪಣ್ಣವರ್ ವಾದ ಮಂಡಿಸಿ, ಕಳೆದ 6 ವರ್ಷಗಳಿಂದ ಆರೋಪಿಗಳು ಜೈಲಿನಲ್ಲಿದ್ದಾರೆ. ವಿಚಾರಣೆ ಮುಗಿಯದೇ ದೀರ್ಘ ಕಾಲ ಜೈಲಿನಲ್ಲಿಡುವಂತಿಲ್ಲವೆಂಬ ತೀರ್ಪು ಇದೆ. ವಾದ ಆಲಿಸಿದ ನ್ಯಾಯ ಪೀಠ ಆರೋಪಿಗಳು ಷರತ್ತುಬದ್ದ ಜಾಮೀನು ನೀಡಿದೆ. ಈ ಹಿಂದೆ ಎ-11 ಮೋಹನ್ ನಾಯಕ್ಗೆ ಜಾಮೀನು ಮಂಜೂರಾಗಿತ್ತು.
ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆಯಾಗಿದ್ದ ಗೌರಿ ಲಂಕೇಶ್ ಅವರನ್ನು 2017, ಸೆಪ್ಟೆಂಬರ್ 05 ರಂದು ಗುಂಡಿಕ್ಕಿ ಹತ್ಯೆಗೀಡಾಗಿದ್ದು, ಈ ಸಂಬಂಧ ವಿಶೇಷ ತನಿಖಾ ದಳ ರಚಿಸಲಾಗಿದೆ. ಇದುವರೆಗೂ 18 ಆರೋಪಿಗಳು ಬಂಧನಕ್ಕೊಳಗಾಗಿದ್ದು, 1200 ಪುರಾವೆ ಹಾಗೂ 500 ಕ್ಕೂ ವಿವಿಧ ಬಗೆಯ ಸಾಕ್ಷ್ಯಗಳನ್ನೊಳಗೊಂಡ ಚಾರ್ಜ್ ಶೀಟ್‌ನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿ ಜುಲೈ, 2022 ರಿಂದ ಪ್ರಾರಂಭಗೊಂಡಿದ್ದು, ನ್ಯಾಯಾಲಯದ ಅನುದಿನದ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ವಿಚಾರಣೆಯು ನಿಧಾನಗತಿಯಲ್ಲಿ ಸಾಗಿದೆ. ಆದ್ದರಿಂದ, ಈ ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಿ, ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಗೌರಿ ಲಂಕೇಶ್ ಸಹೋದರಿ ಕವಿತಾ ಲಂಕೇಶ್ ರವರು ಸರ್ಕಾರಕ್ಕೆ ಕೋರಿದ್ದು. ಈ ಬಗ್ಗೆ ಜರೂರು ಅಗತ್ಯ ಕ್ರಮವಹಿಸಲು ಸಿದ್ದರಾಮಯ್ಯ ಸೂಚನೆ ಹೊರಡಿಸಿದ್ದರು.