ಲಕ್ನೋ,ಮಾ.29: ಜೈಲಿನಲ್ಲಿದ್ದ ಗ್ಯಾಂಗ್ಸ್ಟರ್ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಇತ್ತೀಚೆಗಷ್ಟೇ ಅನಾರೋಗ್ಯದ ಕಾರಣ ಬಂದಾ ಜಿಲ್ಲೆಯ ದುರ್ಗಾವತಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.
ಮುಕ್ತಾರ್ ಅವರ ಆರೋಗ್ಯ ಹದಗೆಟ್ಟಿದೆ ಎಂದು ಅವರ ಕುಟುಂಬ ಸದಸ್ಯರು ಬಂದಾಗೆ ತೆರಳಿದ್ದರು. ಮುಖ್ತಾರ್ ಅನ್ಸಾರಿಯವರ ಕಿರಿಯ ಮಗ ಒಮರ್ ಅನ್ಸಾರಿ ಕೂಡ ಬಂದಾ ಆಸ್ಪತ್ರೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಅನಾರೋಗ್ಯದ ನಡುವೆಯೂ ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿ ರಂಜಾನ್ ಪ್ರಯುಕ್ತ ಉಪವಾಸ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಮಾರ್ಚ್ 26ರಂದು ಎದೆ ನೋವು ಕಾಣಿಸಿಕೊಂಡ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
14 ಗಂಟೆಗಳ ಚಿಕಿತ್ಸೆಯ ನಂತರ ವೈದ್ಯರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ ನಂತರ ಮುಕ್ತಾರ್ ಅನ್ಸಾರಿಯನ್ನು ಬಂದಾ ಮಂಡಲ್ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಇದಾದ ಬಳಿಕ ಮತ್ತೊಮ್ಮೆ ಮುಖ್ತಾರ್ ಅನ್ಸಾರಿ ಅವರಿಗೆ ಹೃದಯಾಘಾತವಾಗಿತ್ತು ಎಂದು ತಿಳಿದುಬಂದಿದೆ.
ಮಾಫಿಯಾ ಡಾನ್ ಹಠಾತ್ ನಿಧನದ ಬಳಿಕ ಗಾಜಿಪುರ, ಅಜಂಗಢ ಪೊಲೀಸರಿಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು, ಪ್ರಚೋದಕ ಮತ್ತು ಆಕ್ಷೇಪಾರ್ಹ ಪೋಸ್ಟ್ಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆಗಳನ್ನು ನೀಡಲಾಗಿದೆ. ಮುಹಮ್ಮದಾಬಾದ್ನಲ್ಲಿರುವ ಮುಖ್ತಾರ್ ಅವರ ಪೂರ್ವಜರ ಮನೆಯಲ್ಲಿ ಜನರು ಸೇರಲು ಪ್ರಾರಂಭಿಸಿದ್ದಾರೆ. ಮುಖ್ತಾರ್ ಅನ್ಸಾರಿ ಮನೆ ಸುತ್ತ ಪೊಲೀಸ್ ಪಡೆ ನಿಯೋಜಿಸಲಾಗಿದೆ.
60 ವರ್ಷದ ಮುಖ್ತಾರ್ ಅನ್ಸಾರಿ ಮೌ ಸದರ್ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿದ್ದರು. ಇವರ ವಿರುದ್ಧ 60 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿದ್ದು, 2005 ರಿಂದ ಯುಪಿ ಮತ್ತು ಪಂಜಾಬ್ನಲ್ಲಿ ವಿವಿಧ ಪ್ರಕರಣಗಳಲ್ಲಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು. ಯುಪಿಯ ವಿವಿಧ ನ್ಯಾಯಾಲಯಗಳಿಂದ ಸೆಪ್ಟೆಂಬರ್ 2022 ರಿಂದ ಎಂಟು ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿತ್ತು.