ಬಳ್ಳಾರಿ,ಆ.26: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಮೂಲಗಳ ಸಂರಕ್ಷಣೆಯ ಉದ್ದೇಶದಿಂದ ನಗರದಲ್ಲಿ ತುಂಗಭದ್ರಾ ಕಾಲುವೆಯು ಹಾದು ಹೋಗುವ ವಿವಿಧ ಸ್ಥಳಗಳಲ್ಲಿಯೇ ಕಡ್ಡಾಯವಾಗಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಿ ಪರಿಸರ ಸಂರಕ್ಷಣೆಗಾಗಿ ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಬೆಂಗಳೂರು ರಸ್ತೆ, ತಾಳೂರು ರಸ್ತೆ, ಕಪ್ಪಗಲ್ಲು ರಸ್ತೆ, ಅಲ್ಲೀಪುರ (ಹೊಸಪೇಟೆ ರಸ್ತೆ), ಬೆಳಗಲ್ಲು ರಸ್ತೆ (ಡಿ.ಸಿ ನಗರ), ಸಿರುಗುಪ್ಪ ರಸ್ತೆಯ ಹವಂಭಾವಿ, ಬಂಡಿಹಟ್ಟಿಯ ಆಲದಹಳ್ಳಿ ರಸ್ತೆ ಮತ್ತು ಭತ್ರಿ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅಧಿಸೂಚನೆಯಂತೆ ರಾಜ್ಯದಲ್ಲಿ ಜಲಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿ.ಓ.ಪಿ)ನಿಂದ ತಯಾರಿಸಿದ ಗಣೇಶ ಮೂರ್ತಿಗಳ ಮಾರಾಟ, ಬಳಕೆ ಮತ್ತು ರಾಸಾಯನಿಕದಿಂದ ತಯಾರಿಸಿದ ಬಣ್ಣಗಳ ಲೇಪನವನ್ನು ಗಣೇಶ ಮೂರ್ತಿಯ ತಯಾರಿಕೆಯಲ್ಲಿ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ.
ಹಾಗಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಬಣ್ಣಗಳ ಲೇಪನದಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪೂಜೆಗೆ ಉಪಯೋಗಿಸದೇ ಮಣ್ಣಿನಿಂದ ಹಾಗೂ ನೈಸರ್ಗಿಕ ಬಣ್ಣಗಳನ್ನು ಉಪಯೋಗಿಸಿ ತಯಾರಿಸಿದ ಗಣೇಶ ಮೂರ್ತಿಗಳನ್ನು ಪೂಜಿಸಬೇಕು ಎಂದು ಪಾಲಿಕೆಯು ಪ್ರಕಟಣೆಯಲ್ಲಿ ಕೋರಿದೆ.