ಕಿರುತೆರೆಯ ’ಸಿಲ್ಲಿ ಲಲ್ಲಿ’ ಧಾರವಾಹಿಯಲ್ಲಿ ’ಅರ್ಥವಾಯಿತು ಬಿಡಿ’ ಎಂದು ನಗಿಸುತ್ತಿದ್ದ ಡಾ.ಸಂಗಮೇಶ ಉಪಾಸೆ ಸಾಕಷ್ಟು ಚಿತ್ರಗಳಲ್ಲಿ ಕಾಮಿಡಿ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದರು. ಇದೆಲ್ಲಾದರ ಅನುಭವದಿಂದ ಹೊಸ ಪ್ರಯತ್ನ, ಸಾಧನೆ ಎನ್ನುವಂತೆ ಈಗ ‘ಗಲಿಬಿಲಿ ಗೋವಿಂದ’ ಚಿತ್ರದ ಮುಖಾಂತರ ನಿರ್ದೇಶನ ಜವಬ್ದಾರಿಯನ್ನು ಹೊತ್ತುಕೊಳ್ಳುವ ಜತೆಗೆ ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇವರ ಶ್ರಮಕ್ಕೆ ಬಿಜಾಪುರ ಮೂಲದ ಸಮಾನ ಮನಸ್ಕರುಗಳಾದ ಅಂಬರೀಷ ಬಣಜಿಗೇರ, ಸಂದೀಪ್ ರಾಠೋಡ್, ಚಿದಾನಂದ ಪರಗೊಂಡ, ಮಡಿವಾಳಪ್ಪ.ಎಮ್.ಗೋಗಿ ಮತ್ತು ಚಿದಾನಂದ ಪತ್ತಾರ ಜಂಟಿಯಾಗಿ ಬಂಡವಾಳ ಹೂಡುತಿದ್ದಾರೆ. ಶೀರ್ಷಿಕೆಗೆ ’ನಗುವವರಿಗೆ ಮಾತ್ರ’ ಎಂಬ ಪಂಚಿಂಗ್ ಅಡಿಬರಹ ವಿಶೇಷವಾಗಿದೆ.
ಚಡಚಣ ಸಮೀಪ ಇರುವ ಇಂಚಗೇರಿ ಮಠದ ಆವರಣದಲ್ಲಿ ಅದ್ದೂರಿಯಾಗಿ ಮುಹೂರ್ತ ಸಮಾರಂಭ ನಡೆಯಿತು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಸಂಗಮೇಶ್ ಸಾಧನೆ ಕೊಂಡಾಡಿ ತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು “ಗ್ರಾಮೀಣ ಭಾಗದಲ್ಲಿ ಅನಾಥ ಮಕ್ಕಳ ಕುರಿತು, ಅವರ ಸಮಸ್ಯೆ ಮೇಲೆ ಬೆಳಕು ಚೆಲ್ಲುವ ಹಾಗೂ ಮಕ್ಕಳು ಇದ್ದವರು, ಇಲ್ಲದವರ ಪೋಷಕರ ಪಾಡು ಹೇಗಿರುತ್ತೆ? ಎಂಬುದನ್ನು ಹಾಸ್ಯ ಧಾಟಿಯಲ್ಲಿ ತೋರಿಸುತ್ತಾ, ಕೊನೆಗೆ ಎಲ್ಲರಿಗೂ ಮನಮುಟ್ಟುವಂತಹ ಸಂದೇಶ ಹೇಳಲಾಗುತ್ತಿದೆ. ಹೂರ್ತಿ, ಅಂಜುಟಗಿ, ಬಿಜಾಪುರ, ಇಂಡಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗುವುದು. ಕಲಾವಿದರ ವಿವರಗಳನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು” ಎಂದು ಡಾ.ಸಂಗಮೇಶ ಉಪಾಸೆ ಮಾಹಿತಿ ಬಿಚ್ಚಿಟ್ಟರು.
ಸಂಗೀತ ಪಳನಿ.ಡಿ.ಸೇನಾಪತಿ, ಛಾಯಾಗ್ರಹಣ ಆನಂದ ದಿಂಡ್ವರ್, ಸಂಕಲನ ರವಿತೇಜ್.ಸಿಹೆಚ್, ನೃತ್ಯ ಮಾಲೂರು ಶ್ರೀನಿವಾಸ್ ಅವರದಾಗಿದೆ.


