ಬಳ್ಳಾರಿ, ಜ.09: ನಗರ ಶಾಸಕ ಭರತ್ ರೆಡ್ಡಿಯ ಬೆಂಬಲಿಗರಲ್ಲಿ ರಾಜಶೇಖರ್ ಪ್ರಮುಖನಾಗಿದ್ದು, ಬ್ಯಾನರ್ ಗಲಾಟೆ ಪ್ರಕರಣದಲ್ಲಿ ಸಾವನ್ನಪ್ಪಿದ ರಾಜಶೇಖರ್ ಅವರ ಮೃತದೇಹದ ಅಂತ್ಯಸಂಸ್ಕಾರವನ್ನು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದಲೇ ನಡೆಸಲಾಗಿದೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ಧನ್ ರೆಡ್ಡಿ ಗಂಭೀರ ಆರೋಪಿಸಿದ್ದಾರೆ.
ನಗರದ ಹವಂಬಾವಿಯಲ್ಲಿರುವ ತಮ್ಮ ಗ್ಲಾಸ್ ಹೌಸ್‌ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಪೋಸ್ಟ್‌ಮಾರ್ಟಂ ನಂತರ ಮೃತದೇಹವನ್ನು ಕುಟುಂಬದವರಿಗೆ ಒಪ್ಪಿಸಿ ಅವರ ಇಚ್ಛೆಯಂತೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಅಂಥ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಹೇಳಿದರು.
ಮೃತ ರಾಜಶೇಖರ್ ಅವರ ಆಪ್ತ ರಘು ಎಂಬ ವ್ಯಕ್ತಿ, ಸ್ಮಶಾನದಲ್ಲಿ ಕೆಲಸ ಮಾಡುವ ಸೋಮು ಅವರಿಗೆ ಫೋನ್ ವಿಡಿಯೋ ಕಾಲ್ ಮೂಲಕ ರಾಜಶೇಖರ್ ಅವರ ತಂದೆಯ ಸಮಾಧಿಯನ್ನು ತೋರಿಸಿ, ಅದೇ ಪಕ್ಕದಲ್ಲಿ ರಾಜಶೇಖರ್ ಸಮಾಧಿ ಮಾಡಲು ಸೂಚನೆ ನೀಡಿದ್ದಾನೆ. ಅದರಂತೆ ಸಮಾಧಿ ಕುಣಿ ತೋಡಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ ನಂತರ ರಘು ಮತ್ತೊಮ್ಮೆ ಕರೆ ಮಾಡಿ ತೋಡಿದ ಸಮಾಧಿ ಕುಣಿಯನ್ನು ಮುಚ್ಚಿಸುವಂತೆ ಸೂಚಿಸಿ, ವಿದ್ಯುತ್ ಯಂತ್ರದ ಮೂಲಕ ಮೃತದೇಹವನ್ನು ಸುಟ್ಟು ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಜನಾರ್ಧನ್ ರೆಡ್ಡಿ ಆರೋಪಿಸಿದರು.

ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷಿಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸ್ಮಶಾನದಲ್ಲಿ ಕೆಲಸ ಮಾಡುವ ಸೋಮು ನೀಡಿರುವ ಹೇಳಿಕೆಯ ವಿಡಿಯೋವನ್ನು ದೊಡ್ಡ ಪರದೆಯಲ್ಲಿ ಪ್ರದರ್ಶಿಸಿ ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದರು.
ಸಾಮಾನ್ಯವಾಗಿ ಕಟ್ಟಿಗೆಯಿಂದ ಶವ ಸಂಸ್ಕಾರ ನಡೆಸುವ ಪದ್ಧತಿ ಇದ್ದರೂ, ಇಲ್ಲಿ ಗ್ಯಾಸಿನ ಮೂಲಕ ಶವವನ್ನು ಸುಟ್ಟಿರುವುದು ಗಂಭೀರ ಸಂಚುವ ಸೂಚನೆ ಎಂದು ಜನಾರ್ಧನ್ ರೆಡ್ಡಿ ಹೇಳಿದರು.
ಪೋಸ್ಟ್‌ಮಾರ್ಟಂ ಎರಡು ಬಾರಿ ನಡೆದಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ತನಿಖೆಯಲ್ಲಿ ಸತ್ಯಾಂಶ ಹೊರಬೀಳಲಿದೆ ಎಂದು ಉತ್ತರಿಸಿದರು.
ಈ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರಿಂದ ನಡೆಸುವುದು ಸಾಧ್ಯವಿಲ್ಲ. ತಕ್ಷಣವೇ ಸಿಬಿಐಗೆ ಹಸ್ತಾಂತರಿಸಿ ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ರಾಜಶೇಖರ್ ಸಾವಿನ ಸತ್ಯಾಂಶ ಬಹಿರಂಗವಾಗಬೇಕಾದರೆ ನಿರಪೇಕ್ಷ ತನಿಖೆ ಅನಿವಾರ್ಯ ಎಂದು ಜನಾರ್ಧನ್ ರೆಡ್ಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, ಮುಖಾಂಡರಾದ ಕೆ.ಎಸ್.ದಿವಾಕರ್, ಗುರ್ರಮ್ ವೆಂಕಟರಮಣ, ಸೇರಿದಂತೆ ಉಪಸ್ಥಿತರಿದ್ದರು.


