ನವದೆಹಲಿ: ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಜಿ7 ದೇಶಗಳು ಶನಿವಾರ ಒಕ್ಕೋರಲಿನಿಂದ ಖಂಡಿಸಿವೆ. ಜಿ7 ದೇಶಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಕೆ, ಯುಎಸ್ ಮತ್ತು ಯುರೋಪಿಯನ್ ಒಕ್ಕೂಟ ಭಾರತ ಮತ್ತು ಪಾಕಿಸ್ತಾನ ದೇಶಗಳು ಸಂಯಮ ಕಾಯ್ದುಕೊಳ್ಳಬೇಕೆಂದು ಕರೆ ನೀಡಿವೆ.
“G7 ದೇಶಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಕೆ ಮತ್ತು ಅಮೆರಿಕದ ವಿದೇಶಾಂಗ ಮಂತ್ರಿಗಳು ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ಪ್ರತಿನಿಧಿಗಳಾದ ನಾವು, ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸುತ್ತೇವೆ ಮತ್ತು ಭಾರತ ಮತ್ತು ಪಾಕಿಸ್ತಾನ ಗರಿಷ್ಠ ಸಂಯಮ ಕಾಯ್ದುಕೊಳ್ಳಬೇಕೆಂದು ಕೋರುತ್ತೇವೆ” ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಮಿಲಿಟರಿ ಸಂಘರ್ಷ ಪ್ರಾದೇಶಿಕ ಸ್ಥಿರತೆಗೆ ಬೆದರಿಕೆ ಒಡ್ಡುತ್ತದೆ. ಎರಡೂ ದೇಶಗಳ ನಾಗರಿಕರ ಸುರಕ್ಷತೆಯ ಬಗ್ಗೆ ನಮಗೆ ತೀವ್ರ ಕಳವಳವಿದೆ. ಶಾಂತಿ ಸ್ಥಾಪನೆಗೆ ಎರಡೂ ದೇಶಗಳು ಮಾತುಕತೆ ನಡೆಸಬೇಕು. ನಾವು ಸದ್ಯದ ಉದ್ವಿಗ್ನತೆ ಕಡಿಮೆ ಮಾಡಲು ಮತ್ತು ಶಾಂತಿ ಸ್ಥಾಪನೆಗೆ ಎರಡೂ ದೇಶಗಳು ಮಾತುಕತೆ ನಡೆಸುವಂತೆ ಕರೆ ನೀಡುತ್ತೇವೆ. ನಾವು ಈ ಬೆಳವಣಿಗೆಗಳನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸುತ್ತೇವೆ ಮತ್ತು ತ್ವರಿತ, ಶಾಶ್ವತ ರಾಜತಾಂತ್ರಿಕ ಪರಿಹಾರಕ್ಕಾಗಿ ನಮ್ಮ ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.
ಇದಕ್ಕೂ ಮುನ್ನ, ಅಮೆರಿಕದ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್, ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಅಮೆರಿಕ ಉದ್ದೇಶಿಸಿದೆ. ಉದ್ವಿಗ್ನತೆಯನ್ನು ಕಡಿಮೆ ಮಾಡಲು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಎರಡೂ ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಿದ್ದರು.