ವಿಜಯನಗರ (,ಹೊಸಪೇಟೆ): ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ಅಧ್ಯಕ್ಷೆ ಜಿ. ಪದ್ಮಾವತಿ ರವರ ನೇತೃತ್ವದಲ್ಲಿ ವಿಜಯನಗರ ಜಿಲ್ಲೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ದೇವದಾಸಿ ಮಹಿಳೆಯರು ಹಾಗೂ ತೃತೀಯ ಲಿಂಗಿಯರ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಒತ್ತು ನೀಡಲಾಯಿತು.
ಸಭೆಯಲ್ಲಿ ಮಾತನಾಡಿದ ಜಿ. ಪದ್ಮಾವತಿ ರವರು, ಸರ್ಕಾರದಿಂದ ಘೋಷಿತವಾಗಿರುವ ಹಣ ಪ್ರತಿಯೊಬ್ಬ ಅರ್ಹ ಪಲಾನುಭವಿಗೂ ತಲುಪುವಂತೆ ನಾವು ಕಾರ್ಯನಿರ್ವಹಿಸಬೇಕಾಗಿದೆ. ಜನರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವುದು ಅಧಿಕಾರಿಗಳ ಕರ್ತವ್ಯ. ಸಿಡಿಪಿಒ ಕಚೇರಿಗೆ ಬರುವ ಜನರಿಗೆ ‘ಸರ್ವರ್ ಇಲ್ಲ’ ಎಂಬ ನೆಪ ಹೇಳಿ ತಳ್ಳಿಬಿಡುವ ಅನಾನುಕೂಲ ಸೃಷ್ಟಿಸುವುದು ಸರಿಯಲ್ಲ. ಸರ್ಕಾರಿ ಕೆಲಸ ಜನರ ಹಿತಕ್ಕಾಗಿ ಹೊಣೆಗಾರಿಕೆಯಿಂದ ನಡೆಯಬೇಕು ಎಂದು ಸ್ಪಷ್ಟಪಡಿಸಿದರು.
ಅವರು ಇನ್ನಷ್ಟು ವಿವರಿಸುತ್ತಾ, ಸರ್ಕಾರದಿಂದ ಬರುವ ಹಣವನ್ನು ಹಿಂದಕ್ಕೆ ಕಳಿಸದೆ, ಸಮಯಕ್ಕೆ ತಕ್ಕಂತೆ ಅರ್ಹರ ಕೈಗೆ ತಲುಪಿಸುವುದು ನಮ್ಮ ಮೊದಲ ಆದ್ಯತೆ. ನಮ್ಮ ಸಮೀಕ್ಷೆಯ ಪ್ರಕಾರ ಈ ಭಾಗದಲ್ಲಿ ಹೆಚ್ಚಿನ ದೇವದಾಸಿ ಮಹಿಳೆಯರು ವಾಸವಾಗಿದ್ದಾರೆ. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಲು, ಸಮಾಜದಲ್ಲಿ ತಲೆ ಎತ್ತಿ ಬದುಕಲು ಸರ್ಕಾರದಿಂದ ದೊರೆಯುವ ಪ್ರತಿಯೊಂದು ಸಹಾಯವನ್ನು ಸರಿಯಾಗಿ ಬಳಸಿಕೊಳ್ಳಬೇಕು, ಎಂದು ಭರವಸೆ ನೀಡಿದರು.
ಮಹಿಳೆಯರು ಮತ್ತು ತೃತೀಯ ಲಿಂಗಿಯರ ಮನವಿಸಭೆಯಲ್ಲಿ ಭಾಗವಹಿಸಿದ ದೇವದಾಸಿ ಮಹಿಳೆಯರು ಉದ್ಯೋಗ ಅವಕಾಶ, ವಸತಿ ಯೋಜನೆ, ಆರೋಗ್ಯ ಸೇವೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಇನ್ನಷ್ಟು ನೆರವು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು . ತೃತೀಯ ಲಿಂಗಿಯರು ತಮ್ಮ ಹಕ್ಕುಗಳನ್ನು ಗೌರವಿಸುವಂತೆ ಹಾಗೂ ಸಮಾನತೆ ಒದಗಿಸುವಂತೆ ಆಗ್ರಹ ವ್ಯಕ್ತಪಡಿಸಿದರು.
ಅಧ್ಯಕ್ಷೆಯ ಸ್ಪಷ್ಟ ಸೂಚನೆಅಧ್ಯಕ್ಷೆ ಜಿ. ಪದ್ಮಾವತಿ ರವರು ಅಧಿಕಾರಿಗಳಿಗೆ ಸೂಚನೆ ನೀಡುತ್ತಾ, ಸರ್ಕಾರಿ ಯೋಜನೆಗಳ ಲಾಭ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪುವಂತೆ ನೀವೇ ಕಾರ್ಯನಿರ್ವಹಿಸಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ಜನರಲ್ಲಿ ಸರ್ಕಾರದ ಮೇಲೆ ಅಸಮಾಧಾನಕ್ಕೆ ಕಾರಣವಾಗಬಾರದು. ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಕಾಪಾಡಬೇಕು, ಎಂದು ಎಚ್ಚರಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಆಡಳಿತದ ಪ್ರತಿನಿಧಿಗಳು, ಹಲವಾರು ಮಹಿಳಾ ಸಂಘಟನೆಗಳ ಹಾಗೂ ತೃತೀಯ ಲಿಂಗಿಯರ ಸಂಘಟನೆಯ ಸದಸ್ಯರು ಭಾಗವಹಿಸಿದ್ದರು. ಸಭೆಯ ಅಂತ್ಯದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಯಿತು.