ಬೆಂಗಳೂರು, ಡಿಸೆಂಬರ್ 12: ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಸೋಮವಾರ ನಡೆದ ಪಂಚಮಸಾಲಿ 2ಎ ಮೀಸಲಾತಿ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ನಡೆಸಿದ್ದಕ್ಕೆ ಮತ್ತಷ್ಟು ಕೆರಳಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ, ನಮ್ಮ ಜನ ಇನ್ನಷ್ಟು ಪುಟಿದೇಳುತ್ತಾರೆ ಎಂದಿದ್ದಾರೆ. ಅಲ್ಲದೆ, ಇಷ್ಟು ದಿನ ಶಾಂತಿಯುತ ಹೋರಾಟ ಆಗಿತ್ತು, ಇನ್ಮೇಲೆ ಹಳ್ಳಿ ಹಳ್ಳಿಯಲ್ಲೂ ಕ್ರಾಂತಿಯುತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇತ್ತ ಲಾಠಿ ಚಾರ್ಜ್ ಸಮರ್ಥಿಸಿಕೊಂಡಂತೆ ಮಾತನಾಡಿರುವ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್, ಗಲಾಟೆ ಮಾಡುವ ಉದ್ದೇಶದಿಂದಲೇ ಹೋರಾಟಗಾರರು ಬಂದಿದ್ದರು ಎಂದಿದ್ದಾರೆ.