ಮಾಜಿ ಸಚಿವ ಬಿ. ನಾಗೇಂದ್ರ ಇಡಿ ವಶಕ್ಕೆ: ವಾಲ್ಮೀಕಿ ನಿಗಮ ಹಗರಣ  ಕುರಿತು ಹೆಚ್ಚಿನ ವಿಚಾರಣೆ

Ravi Talawar
ಮಾಜಿ ಸಚಿವ ಬಿ. ನಾಗೇಂದ್ರ ಇಡಿ ವಶಕ್ಕೆ: ವಾಲ್ಮೀಕಿ ನಿಗಮ ಹಗರಣ  ಕುರಿತು ಹೆಚ್ಚಿನ ವಿಚಾರಣೆ
WhatsApp Group Join Now
Telegram Group Join Now

ಬೆಂಗಳೂರು: ನಿರಂತರ 40 ಗಂಟೆಗಳ ತಪಾಸಣೆ ಹಾಗೂ ತನಿಖೆಯ ಬಳಿಕ, ವಾಲ್ಮೀಕಿ ನಿಗಮ ಹಗರಣ  ಕುರಿತು ಹೆಚ್ಚಿನ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ  ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೊನ್ನೆ ಮುಂಜಾನೆಯಿಂದ ನಾಗೇಂದ್ರ ಮನೆ ಹಾಗೂ ಕಚೇರಿ ಮುಂತಾದೆಡೆ ಇಡಿ ದಾಳಿ  ನಡೆದಿತ್ತು.

40 ಗಂಟೆಗಳ ಕಾಲ ನಾಗೇಂದ್ರ ಹಾಗೂ ಕುಟುಂಬದವರನ್ನು ಮನೆಯಿಂದ ಹೊರಬಿಡದ ಇಡಿ ಅಧಿಕಾರಿಗಳು ನಿರಂತರವಾಗಿ ಪ್ರಶ್ನೆ ಮಾಡಿದ್ದರು. ವಾಲ್ಮೀಕಿ ನಿಗಮದಲ್ಲಿ ನಡೆದ 185 ಕೋಟಿ ರೂಪಾಯಿಗಳ ಹಗರಣದ ಬಗ್ಗೆ ಯಾವುದೇ ಸುಳಿವು ತಮಗಿಲ್ಲ ಎಂದೇ ನಾಗೇಂದ್ರ ಹೇಳಿದ್ದರು. ಆದರೆ ನಾಗೇಂದ್ರ ಅವರ ಆಪ್ತ ಸಹಾಯಕ ಹರೀಶ್‌ ಹೇಳಿಕೆಯಿಂದಾಗಿ ನಾಗೇಂದ್ರ ಹೇಳಿಕೆಯ ಬಗ್ಗೆ ಅನುಮಾನ ಮೂಡಿದ್ದು, ಹೆಚ್ಚಿನ ತನಿಖೆಗಾಗಿ ಅವರನ್ನು ಕರೆದೊಯ್ಯಲಾಗಿದೆ.

ಇಂದು ಬೆಂಗಳೂರಿನ ಇಡಿ ಕಚೇರಿಯಲ್ಲಿ ಅಧಿಕಾರಿಗಳು ಅವರನ್ನು ಪ್ರಶ್ನಿಸಲಿದ್ದಾರೆ. ನಾಗೇಂದ್ರ ಸಿಎ ಹರೀಶ್‌ ಕೂಡ ನಿನ್ನೆಯಿಂದ ಇಡಿ ವಶದಲ್ಲಿದ್ದಾರೆ. ಯೂನಿಯನ್‌ ಬ್ಯಾಂಕ್‌ನಲ್ಲಿ ಸುಳ್ಳು ದಾಖಲೆ ನೀಡಿ ಅಕ್ರಮ ಖಾತೆ ತೆರೆದು ಕೋಟ್ಯಂತರ ರೂಪಾಯಿ ನಿಗಮದ ಹಣವನ್ನು ಅಲ್ಲಿಗೆ ವರ್ಗಾಯಿಸಿದ ಕುರಿತು ಹರೀಶ್‌ ಹೇಳಿಕೆಯಲ್ಲಿ ಕೆಲವು ಸಾಕ್ಷಿಗಳು ದೊರೆತಿವೆ.

ಬ್ಯಾಂಕ್‌ ಸಿಸಿಟಿವಿ ರೆಕಾರ್ಡ್‌ಗಳನ್ನು ಚೆಕ್‌ ಮಾಡಿದಾಗಲೂ, ನಾಗೇಂದ್ರ ಸಿಎ ಹಾಗೂ ಶಾಸಕ ದದ್ದಲ್‌ ಸಿಎ ಅಲ್ಲಿಗೆ ಬಂದು ಹೋದ ಕುರಿತು ದಾಖಲೆ ಲಭ್ಯವಾಗಿದೆ. 50 ಲಕ್ಷ ಡೀಲ್‌ ನಡೆಸಲಾಗಿರುವ ಕುರಿತು ಬಂಧಿತರಾಗಿರುವ ಬ್ಯಾಂಕ್‌ ಅಧಿಕಾರಿಗಳು ಬಾಯಿ ಬಿಟ್ಟಿದ್ದಾರೆ. ಹೀಗಾಗಿ ಈಗ ಹೆಚ್ಚಿನ ತನಿಖೆಯ ಉರುಳು ನಾಗೇಂದ್ರ ಕೊರಳಿಗೆ ಸುತ್ತಿಕೊಂಡಿದೆ.

ಬಿ. ನಾಗೇಂದ್ರ ಹಾಗೂ ಬಸವನಗೌಡ ದದ್ದಲ್ ನಿವಾಸಗಳ ಜತೆಗೆ ಮೂವರು ಯೂನಿಯನ್ ಬ್ಯಾಂಕ್ ಸಿಬ್ಬಂದಿ ಮನೆಯ ಮೇಲೂ ಇಡಿ ದಾಳಿ ನಡೆಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರವಾದ್ದರಿಂದ ವಸಂತನಗರದಲ್ಲಿರುವ ವಾಲ್ಮೀಕಿ ನಿಗಮದ ಕಚೇರಿಗೂ ಇಡಿ ರೇಡ್‌ ಮಾಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದೆ.

ಆರೋಪಿ ಸತ್ಯನಾರಾಯಣ್‌ನಿಂದ ವಾಲ್ಮೀಕಿ ನಿಗಮದ ಎಂ.ಡಿ. ಪದ್ಮನಾಭ್ ಹಣ ತಂದಿದ್ದರು ಎನ್ನಲಾಗಿದೆ. ಆ ಹಣದಲ್ಲಿ ನಾಗೇಂದ್ರ ಪಿಎ ಹರೀಶ್‌ 25 ಲಕ್ಷ ಹಣ ಪಡೆದಿದ್ದ. ದದ್ದಲ್ ಪಿಎ ಪಂಪಣ್ಣ ಕೂಡ 55 ಲಕ್ಷ ಹಣ ಪಡೆದಿದ್ದ. ಈ ಬಗ್ಗೆ ಪರಿಶೀಲನೆ ವೇಳೆ ಹರೀಶ್ ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಆತನನ್ನು ಇಡಿ ವಶಕ್ಕೆ ಪಡೆದಿದೆ. ಪ್ರಕರಣದಲ್ಲಿ ಸಚಿವ ನಾಗೇಂದ್ರ ಪರ 50ರಿಂದ 60 ಕೋಟಿ ವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆ ನಡೆದಿದೆ.

WhatsApp Group Join Now
Telegram Group Join Now
Share This Article