ನೇಸರಗಿ. ಇಲ್ಲಿನ ಪ್ರತಿಷ್ಠಿತ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವವು ಸೋಮವಾರ ದಿ. 05-05-2025 ರಿಂದ ಶುಕ್ರವಾರ ದಿ. 09-05-2025 ರ ವರೆಗೆ ಅತೀ ವಿಜೃಂಭಣೆಯಿಂದ ಜರುಗಲಿದೆ. ಮೇ. 05 ರಂದು ಬ್ರಾಹ್ಮೀ ಮಹೂರ್ತದಲ್ಲಿ ಶ್ರೀ ವೀರಭದ್ರೇಶ್ವರ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಪ್ರಸಾದ ಸಂಜೆ 4 ಘಂಟೆಗೆ ಕಳಸಾರೋಹಣ ನೆರವೇರುವದು. ಮೇ. 6 ರಂದು ಗ್ರಾಮದ ದೈವದ ವತಿಯಿಂದ ಗ್ರಾಮದೇವಿಯರಿಗೆ ಉಡಿ ತುಂಬುವದು.

ಮೇ. 7 ರಂದು ಬೆಳಿಗ್ಗೆ 7 ಘಂಟೆಗೆ ನೇಸರಗಿ ಮಲ್ಲಾಪೂರದ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಹಾಗೂ ಹಣಬರಹಟ್ಟಿಯ ಹಿರೇಮಠದ ಶ್ರೀ ಬಸವಲಿಂಗ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಡಾ. ಎಸ್ ಬಿ. ಗೆಜ್ಜಿ ಅವರ ವಂಶಸ್ಥರ ವತಿಯಿಂದ ಉಚಿತ ಸಾಮೂಹಿಕ ರವಿ ಗುಗ್ಗಳೋತ್ಸವ ಏರ್ಪಡಿಸಲಾಗಿದೆ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ಉಚಿತ ರವಿ ಗುಗ್ಗಲೋತ್ಸವದಲ್ಲಿ ಪಾಲ್ಗೊಳ್ಳಲು ದಿ. 04-05-2025 ರ ಒಳಗಾಗಿ ಮೊ. ನಂ. 9535883527 ,7026211363 ಈ ನಂಬರ ಗೆ ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಲು ಕೋರಲಾಗಿದೆ.

ಈ ಒಂದು ಗುಗ್ಗಳೋತ್ಸವ ಕಾರ್ಯಕ್ರಮದಲ್ಲಿ ಗೋಕಾಕ ತಾಲೂಕಿನ ಕಲ್ಲೋಳಿ ಹಾಗೂ ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಉಡಗಿ ಪುರವಂತರಿಂದ ಒಡಪು, ಜೈ ಹನುಮಾನ ಸಾಂಬಾಳ ಮಜಲ್ ಇವರಿಂದ ಒಡಪು, ವೀರಗಾಸೆ ಹಾಗೂ ಕುಣಿತದ ವಿಶೇಷ ಕಾರ್ಯಕ್ರಮ ಜರುಗುವವು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗೊಂಬೆ ಕುಣಿತ ಕಾರ್ಯಕ್ರಮ ನಡೆಯಲಿದೆ. ವರ್ಷದ ಪದ್ಧತಿಯಂತೆ ರಥಬೀದಿಗಳಲ್ಲಿ ರಂಗೋಲಿ ಹಾಕಿ ಸಾಯಂಕಾಲ 3 ಘಂಟೆಗೆ ಶ್ರೀ ವೀರಭದ್ರೇಶ್ವರ ದೇವರ ಮಹಾ ರಥೋತ್ಸವ ನೆರವೇರುವದು. ಮೇ. 8 ರಂದು ಮದ್ಯಾಹ್ನ 3 ಘಂಟೆಗೆ ದೇವಸ್ಥಾನದ ಓಣಿಯಲ್ಲಿ 50 ಕೆ ಜಿ ಉಸುಕು ಹಾಕಿದ (ಪುಣಾಗಾಡಿ ಚಕ್ಕಡಿ) ಬಂಡಿಯನ್ನು ಇಬ್ಬರು ಹುಡುಗರು ಕೊಡಿಕೊಂಡು ಜಗ್ಗುವ ಸ್ಪರ್ಧೆ ಏರ್ಪಡಿಸಲಾಗಿದೆ.

ರಾತ್ರಿ 8 ಘಂಟೆಗೆ ಕರ್ನಾಟಕ ಚೌಕದಲ್ಲಿ ಶ್ರೀ ಭೂತಾಳಿ ಸಿದ್ದೇಶ್ವರ ಗಾಯನ ಸಂಘ ಹರದೇಶಿ ಮೇಳ ಮರಡಿನಾಗಲಾಪುರ ಹಾಗೂ ಶ್ರೀ ದುರ್ಗಾದೇವಿ ಗಾಯನ ಸಂಘ, ನಾಗೇಶಿ ಮೇಳ, ಬೈಲಹೊಂಗಲ ಇವರಿಂದ ಜಿದ್ದಾಜಿದ್ದಿ ಗಾಯನ ನಡೆಯಲಿದೆ. ಮೇ. 9 ರಂದು ಸಂಜೆ 6 ಘಂಟೆಗೆ ಕಳಸ ಇಳಿಸುವದು ನಂತರ ಸಂಜೆ 7 ಘಂಟೆಗೆ ಗುಡಿ ಓಣಿ ಹುಡುಗರಿಂದ ಲಕ್ಷದೀಪೋತ್ಸವ ಹಾಗೂ ಪ್ರತಿದಿನ ಭಜನಾ ಕಾರ್ಯಕ್ರಮ ನಡೆಯಲಿವೆ ಎಂದು ಶ್ರೀ ವೀರಭದ್ರೇಶ್ವರ ಜಾತ್ರಾ ಕಮಿಟಿಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.