ಯರಗಟ್ಟಿ : ತಾಲೂಕಿನ ದಾಸನಾಳ ಗ್ರಾಮದ ಕೆ.ಎಚ್.ಪಿ.ಎಸ್ ಶಾಲೆಯಲ್ಲಿ ಮಕ್ಕಳ ಶಿಕ್ಷಣಾಭಿವೃದ್ಧಿಗೆ ಮಾದರಿಯಾದ ಕಾರ್ಯ ನಡೆದಿದೆ. ೧ರಿಂದ ೫ನೇ ತರಗತಿ ಮಕ್ಕಳಿಗೆ ಬೇಸಿಗೆ ರಜೆಯ ಅವಧಿಯಲ್ಲಿ ಅಭ್ಯಾಸ ನಿರಂತರವಾಗಿರಲೆಂದು ಶಾಲೆಯ ಎಲ್ಲಾ ಶಿಕ್ಷಕರು ಒಗ್ಗೂಡಿ ತಮ್ಮ ಸ್ವಂತ ಖರ್ಚಿನಲ್ಲಿ ೪೫ ಪುಟಗಳ ಮನೆಗಲಸದ ಅಭ್ಯಾಸ ಪುಸ್ತಕಗಳನ್ನು ಸಿದ್ಧಪಡಿಸಿ ಎಲ್ಲ ವಿದ್ಯಾರ್ಥಿಗಳಿಗೆ ವಿತರಿಸಿದರು.
ಇದೇ ವೇಳೆ, ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಒದಗಿಸಲಾದ ೬ ಮತ್ತು ೭ನೇ ತರಗತಿ ವಿದ್ಯಾರ್ಥಿಗಳಿಗೂ ಬೇಸಿಗೆ ರಜೆಯ ಅಭ್ಯಾಸ ಪುಸ್ತಕಗಳನ್ನು ವಿತರಿಸಲಾಯಿತು.
ಈ ಕಾರ್ಯದಿಂದ ವಿದ್ಯಾರ್ಥಿಗಳಲ್ಲಿ ಅಧ್ಯಯನದ ಮೇಲಿನ ಆಸಕ್ತಿ ಹೆಚ್ಚಿಸಲು ಹಾಗೂ ರಜೆ ಸಮಯವನ್ನು ಸದ್ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ.
ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಮಹದೇವ ಶಿಂತ್ರಿ, ಸದಸ್ಯರಾದ ಪತ್ರೆಪ್ಪ ಬಳಿಗಾರ, ಪ್ರಧಾನ ಗುರುಗಳಾದ ಜಿ. ಎಸ್. ನೆಲಗುಡ್ಡ, ಶಿಕ್ಷಕರಾದ ಎಸ್. ಬಿ. ಬಾಳೋಜಿ, ವಿದ್ಯಾ ಅಂಗಡಿ, ಲಕ್ಷ್ಮೀ ಕುರುಬೇಟ, ಲಕ್ಷ್ಮಣ ತಳವಾರ ಹಾಗೂ ಶಾಲೆಯ ಮುದ್ದು ಮಕ್ಕಳು ಉಪಸ್ಥಿತರಿದ್ದರು.


