ಕೊಯಿಕ್ಕೋಡ್ (ಕೇರಳ): ಇಲ್ಲಿನ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು, ಘಟನೆಯಲ್ಲಿ ಮಹಿಳೆ ಸೇರಿದಂತೆ ನಾಲ್ವರು ರೋಗಿಗಳು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಪೊಲೀಸರ ಪ್ರಕಾರ, ಯುಪಿಎಸ್ ಕೋಣೆಯಲ್ಲಿ ಸ್ಪೋಟದಂತಹ ಶಬ್ಧ ಕೇಳಿಬಂದಿದ್ದು, ಬಳಿಕ ದಟ್ಟವಾದ ಹೊಗೆ ಹರಡಿತು. ತಕ್ಷಣಕ್ಕೆ ರೋಗಿಗಳನ್ನು ಸ್ಥಳಾಂತರ ನಡೆಸಲಾಯಿತು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಘಟನೆ ಕುರಿತು ಮಾತನಾಡಿದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಜಿತ್ ಕುಮಾರ್, ಸಾವನ್ನಪ್ಪಿದ ನಾಲ್ವರು ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರ ಸಾವಿಗೆ ಹೊಗೆ ಕಾರಣವಲ್ಲ. ಸಾವನ್ನಪ್ಪಿದ ರೋಗಿಗಳಲ್ಲಿ ಇಬ್ಬರು ಶುಕ್ರವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರು ಕ್ಯಾನ್ಸರ್, ಮತ್ತೊಬ್ಬರಿಗೆ ಲಿವರ್ ಸಿರೋಸಿಸ್ ಸಮಸ್ಯೆಯಿಂದ ಗಂಭೀರ ಸ್ಥಿತಿಯಲ್ಲಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳು ಮಾತನಾಡಿ, ದಟ್ಟ ಹೊಗೆಯಿಂದಾಗಿ ವೆಂಟಿಲೇಟರ್‌ಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ. ತುರ್ತು ಚಿಕಿತ್ಸೆಗೆ ತಡೆವುಂಟಾಗಿ ಸಾವು ಸಂಭವಿರಬಹುದು ಎಂಬ ಆರೋಪ ಕೇಳಿ ಬಂದಿದೆ ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಟಿ.ಸಿದ್ದೀಕ್ ಅವರು ವೈದ್ಯರ ಹೇಳಿಕೆಯನ್ನು ಟೀಕಿಸಿದ್ದಾರೆ. ಘಟನೆಯ ಬಗ್ಗೆ ಸರಿಯಾದ ತನಿಖೆ ನಡೆಸದೆ, ಆಸ್ಪತ್ರೆ ಅಧಿಕಾರಿಗಳು ಹೇಳಿಕೆ ನೀಡುತ್ತಿದ್ದಾರೆ. ಹೊಗೆಯಿಂದ ಉಸಿರಾಟ ಸಮಸ್ಯೆಯಾಗಿ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.