ಧಾರವಾಡ: ಇಡೀ ದೇಶದಲ್ಲೇ ಹೆಸರುವಾಸಿಯಾದ ಧಾರವಾಡ ಕೃಷಿ ವಿಶ್ವವಿದ್ಯಾಲಯವು ಆಯೋಜನೆ ಮಾಡುವ ಕೃಷಿ ಮೇಳವು ಪ್ರಸಕ್ತ ವರ್ಷ ಸೆ.13 ರಿಂದ 16ರವರೆಗೆ ನಾಲ್ಕು ದಿನಗಳ ಕಾಲ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ಮಾಹಿತಿ ನೀಡಿದರು.
ಪ್ರಸಕ್ತ ವರ್ಷ “ಪೌಷ್ಠಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು” ಎಂಬ ಘೋಷವಾಕ್ಯದಡಿ ಕೃಷಿ ಮೇಳ ಆಯೋಜಿಸಲಾಗಿದೆ. ಸೆ.13 ರಂದು ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸೆ.14 ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಬೀಜ ಮೇಳಕ್ಕೆ ಚಾಲನೆ ನೀಡುವರು ಎಂದರು.
ಸೆ.15 ರಂದು ಬೆಳಿಗ್ಗೆ 11-30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷಿ ಮೇಳಕ್ಕೆ ಚಾಲನೆ ನೀಡುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚೆಲುವರಾಯಸ್ವಾಮಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೇಷ್ಠ ಕೃಷಿಕ, ಕೃಷಿ ಮಹಿಳೆ ಪ್ರಶಸ್ತಿ ಪ್ರದಾನ ಮಾಡುವರು ಎಂದರು.
ಪ್ರಸಕ್ತ ವರ್ಷ ಕೂಡ ಲಕ್ಷಾಂತರ ಜನ ರೈತರು ಕೃಷಿ ಮೇಳದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. 162 ಹೈಟೆಕ್ ಮಳಿಗೆಗಳು, 272 ಸಾಮಾನ್ಯ ಮಳಿಗೆಗಳು, 99 ಯಂತ್ರೋಪಕರಣ ಮಳಿಗೆಗಳು, 50 ಜಾನುವಾರು ಪ್ರದರ್ಶನ ಮಳಿಗೆಗಳು, 29 ಆಹಾರ ಮಳಿಗೆಗಳನ್ನು ಈಗಾಗಲೇ ಬುಕ್ ಮಾಡಲಾಗಿದೆ ಎಂದು ಕುಲಪತಿಗಳು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿ ವಿ ಕುಲಪತಿ ಡಾ ಪಿ ಎಲ್ ಪಾಟೀಲ. ಮತ್ತು ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.