ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ೯೭ ನೇ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಸಂಸ್ಥಾಪನಾ ದಿನ ಆಚರಣೆ

Ravi Talawar
ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ೯೭ ನೇ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಸಂಸ್ಥಾಪನಾ ದಿನ ಆಚರಣೆ
WhatsApp Group Join Now
Telegram Group Join Now

ಬೆಳಗಾವಿ: ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ೯೭ ನೇ ಸಂಸ್ಥಾಪನಾ ದಿನವನ್ನು ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆಚರಿಸಲಾಯಿತು.
ದಿನಾಚರಣೆಯ ಉದ್ಘಾಟನೆಯನ್ನು ಧಾರವಾಡದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆಯ ಮುಖ್ಯಸ್ಥರಾದ ಡಾ. ಗಿರೀಶ ಎನ್. ಮರಡ್ಡಿಯವರು ಉದ್ಘಾಟಿಸಿ, ತಮ್ಮ ಅನುಭವಗಳನ್ನು ರೈತರೊಂದಿಗೆ ಹಂಚಿಕೊಂಡರು. ರೈತರೆಲ್ಲರೂ ಈ ದಿನವನ್ನು ಭಾರತೀಯ ಕೃಷಿ ಅನುಸಂಧಾನ ಪರಿ?ತ್‌ನ ಸಂಸ್ಥಾಪನಾ ದಿನದ ಜೊತೆಗೆ ತಮ್ಮ ಮಣ್ಣಿನ ಸಂರಕ್ಷಣೆಯನ್ನು ಮಾಡಿಕೊಳ್ಳಲು ಪ್ರಯತ್ನಿಸಬೇಕೆಂದು ತಿಳಿಸಿದರು.  ಮುಖ್ಯ ಅತಿಥಿಗಳಾಗಿ ಡಾ. ರವಿಕುಮಾರ ಹೊಸಮನಿ, ಸಹಾಯಕ ಪ್ರಾಧ್ಯಾಪಕರು, ಕೃಷಿ ಕೀಟ ಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರು ಅಂತರಿಕ್ಷ ಯಾನದಲ್ಲಿ ಕೃಷಿಗೆ ಸಂಬಂಧಪಟ್ಟ ಸಂಶೋಧನೆಗಳ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿ ವಹಿಸಿ ಮಾತನಾಡುತ್ತ, ಭಾರತೀಯ ಕೃಷಿ ಅನುಸಂಧಾನ ಪರಿಷತ್ ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇಶದಲ್ಲಿ ಗುಣಮಟ್ಟದ ಕೃಷಿ ಶಿಕ್ಷಣ, ಕೃಷಿ ಸಂಶೋಧನೆ ಹಾಗೂ ಕೃಷಿ ವಿಸ್ತರಣಾ ಕಾರ್ಯವನ್ನು ನಿರ್ವಹಿಸುವ ಅತ್ಯುನ್ನತ ಸಂಸ್ಥೆಯಾಗಿದೆ.  ಈ ಸಂಸ್ಥೆಯು ವಿಶ್ವದಲ್ಲಿಯೇ ಬೃಹತ್ ರಾಷ್ಟ್ರೀಯ ಕೃಷಿ ವ್ಯವಸ್ಥೆಯಾಗಿದ್ದು, ದೇಶಾದ್ಯಂತ ೭೩೧ ಕೃಷಿ ವಿಜ್ಞಾನ ಕೇಂದ್ರಗಳು ಕೃಷಿ ವಿಸ್ತರಣಾ ಚಟುವಟಿಕೆಯಲ್ಲಿ ನಿರತವಾಗಿವೆ ಎಂದರು.

ದಿನಾಚರಣೆಯ ಭಾಗವಾಗಿ ಕೇಂದ್ರದಲ್ಲಿ ಕೃಷಿ ತಂತ್ರಜ್ಞಾನ ಪ್ರದರ್ಶನ ವ್ಯವಸ್ಥೆಯನ್ನು ಮಾಡಲಾಯಿತು ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧನೆಯ ಉತ್ಪನ್ನಗಳು, ನೈಸರ್ಗಿಕ ಕೃಷಿ ಪರಿಕರಗಳು, ವಿವಿಧ ಸುಧಾರಿತ ತಳಿ ಬೀಜಗಳು, ಜೈವಿಕ ಗೊಬ್ಬರ, ಎರೆಜಲ, ದೇಸಿ ತಳಿಯ ತರಕಾರಿ ಬೀಜಗಳು, ಗುಣಮಟ್ಟದ ಹಣ್ಣು ಬೆಳೆಗಳ ಸಸಿಗಳು, ಸಸ್ಯ ಸಂರಕ್ಷಣಾ ಕೀಟ್ ಹಾಗೂ ಪೀಡೆನಾಶಕಗಳ ಪರಿಚಯ ಮಾಡಲಾಯಿತು. ಅದರಂತೆ, ರೈತರ ಜಮೀನುಗಳಲ್ಲಿ ಮತ್ತು ಸಮುದಾಯ ಸ್ಥಳಗಳಲ್ಲಿ ಅರಣ್ಯ ಸಸಿಗಳನ್ನು ನೆಡುವುದರಿಂದ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಡಾ. ಎಸ್. ಎಸ್. ಹಿರೇಮಠ, ಎಸ್. ಎಮ್. ವಾರದ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಕ್ಷೇತ್ರ ವ್ಯವಸ್ಥಾಪಕ ಶಂಕರಗೌಡ ಪಾಟೀಲ ಭಾಗವಹಿಸಿದ್ದರು ಹಾಗೂ ೧೩೦ ಕ್ಕೂ ಹೆಚ್ಚು ಚಿಕ್ಕೋಡಿ, ಹುಕ್ಕೇರಿ ಮತ್ತು ಬೈಲಹೊಂಗಲ ಭಾಗದ ರೈತ/ರೈತ ಮಹಿಳೆಯರು ಪಾಲ್ಗೊಂಡಿದ್ದರು.

 

 

WhatsApp Group Join Now
Telegram Group Join Now
Share This Article