ಬಳ್ಳಾರಿ. ಫೇ. 02 : ನಗರದ ಆರಾಧ್ಯ ದೈವ ಕೋಟೆ ಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವ ಇಂದು ಸಂಜೆ ಸಾವಿರಾರು ಭಕ್ತರ ಶ್ರದ್ಧೆ ಮತ್ತು ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ನಡೆಯಿತು, ನಗರದ ತೇರು ಬಜಾರು ರಸ್ತೆಯಲ್ಲಿರುವ ಸಣ್ಣ ಮಲ್ಲೇಶ್ವರ ಗುಡಿ ಮುಂದೆ ಬೆಳಿಗ್ಗೆಯಿಂದಲೇ ರಥಕ್ಕೆ ವಿಶೇಷ ಪೂಜೆ ನಡೆಯಿತು.
ಇಂದು ಬೆಳಗಿನದಲ್ಲಿ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿ ಮುಂಜಾನೆ 10.15ರ ಕ್ಕೆ ನೂರಾರು ಭಕ್ತರು ಸೇರಿಕೊಂಡು ಮಡಿ ತೇರನ್ನು ಎಳೆದರು. ಸಂಜೆ 4.15ಕ್ಕೆ ತೆರಿಗೆ ವಿವಿಧ ಪುಷ್ಪ ಅಲಂಕಾರಗಳೊಂದಿಗೆ ಮತ್ತು ಬಾಳೆ ದಿಂಡು ಹಾಗೂ ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಗರದ ಭಕ್ತರೊಂದಿಗೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಸಾವಿರಾರು ಭಕ್ತರ ಸಂಭ್ರಮದ ನಡುವೆ ತೇರು ಸಾಗಿತು.
ಬ್ರೂಸ್ಪೇಟೆ ಠಾಣೆ ಮುಂಭಾಗ ದಿಂದ ಮುಂದುವರಿದ ತೇರು ದೊಡ್ಡ ಮಾರುಕಟ್ಟೆ, ನೀಲಕಂಠೇಶ್ವರ ಗುಡಿ ಮೂಲಕ ಕಣೇಕಲ್ಲು ಬಸ್ ನಿಲ್ದಾಣ ಸಮೀಪದವರೆಗೂ ಸಾಗಿ ಹಿಂದಿರುಗಿತು. ಬಜಾರು ರಸ್ತೆಯ ಅಕ್ಕ ಪಕ್ಕದಲ್ಲಿ, ಕಟ್ಟಡಗಳ ಮೇಲ್ಭಾಗದಲ್ಲಿ ನಿಂತು ಭಕ್ತರು ತೇರಿಗೆ ಹೂವು ಹಣ್ಣು ಅರ್ಪಿಸಿ ಹರಕೆ ತೀರಿಸಿದರು.
ರಥವನ್ನು ಎಳೆಯಲು ಭಕ್ತರು ನಾ ಮುಂದು ತಾ ಮುಂದು ಎಂದು ನೂಕು ನುಗ್ಗಲಿನಲ್ಲಿ ರಥದ ಸಮೀಪಕ್ಕೆ ಹೋಗಲು ಪ್ರಯತ್ನಿಸಿದಾಗ ಒಬ್ಬರಿಗೊಬ್ಬರು ತಳ್ಳಾಡಿದ ಪ್ರಸಂಗ ಜರುಗಿತು. ಪರಿಣಾಮವಾಗಿ ತಳ್ಳಾಟ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು ಕಂಡು ಬಂತು . ತೇರಿಗೆ ಎಸೆದ ಬಾಳೆಹಣ್ಣುಗಳ ಮೇಲೆ ಕಾಲಿಟ್ಟ ಭಕ್ತರು ಜಾರಿ ಬಿದ್ದ ಪ್ರಸಂಗವೂ ನಡೆಯಿತು.
ತೇರು ಬಜಾರಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲೂ ಲಕ್ಷಾಂತರ ಭಕ್ತರು ಮತ್ತು ವಾಹನ ದಟ್ಟಣೆ ಅತಿಹೆಚ್ಚಿನಲ್ಲಿ ಸೇರಿತ್ತು.
ಈ ಬ್ರಹ್ಮರಥೋತ್ಸವ ಕಾರ್ಯಕ್ರಮದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಮೇಯರ್ ಪಿ ಗಾದೆಪ್ಪ, ಮಹಾನಗರ ಪಾಲಿಕೆ ಸದಸ್ಯರಾದ ವಿಕ್ಕಿ, ರಾಮಾಂಜಿನಿ, ಬಿ ಆರ್ ಎಲ್ ಸೀನಾ ಮುಖಂಡರಾದ ವಿಷ್ಣು ಭಯ ಪಾರ್ಟಿ ಚಾನಾಳ್ ಶೇಖರ್ ಸೇರಿದಂತೆ ಇತರ ಮುಖಂಡರುಗಳಿದ್ದರು.


