ಬೆಂಗಳೂರು, ಡಿಸೆಂಬರ್ 26: ಭಾರತದ ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ, ಹಿರಿಯ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರು ಗುರುವಾರ ದೆಹಲಿಯಲ್ಲಿ ವಿಧಿವಶರಾಗಿದ್ದಾರೆ. ಅವರ ನಿಧನ ಹಿನ್ನೆಲೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿ 7 ದಿನಗಳ ಕಾಲ ಶೋಕಾಚರಣೆ ಮತ್ತು ಇಂದು (ಡಿ.27) ಸರ್ಕಾರಿ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ.
ಮನಮೋಹನ್ ಸಿಂಗ್ ನಿಧನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮನಮೋಹನ್ ಸಿಂಗ್ ಕೊಡುಗೆ ಮರೆಯಲು ಸಾಧ್ಯವಿಲ್ಲ. ನಾಳೆ ಬೆಳಗಾವಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ರದ್ದು ಮಾಡಲಾಗಿದೆ. ವರಿಷ್ಠರ ಜೊತೆ ಚರ್ಚಿಸಿ ಮುಂದೆ ಕಾರ್ಯಕ್ರಮ ಮಾಡುತ್ತೇವೆ. ನಾಳೆ ಸರ್ಕಾರಿ ರಜೆ ಘೋಷಿಸಲಾಗಿದೆ. ರಾಜ್ಯದಲ್ಲಿ ಒಂದು ವಾರ ಶೋಕಾಚರಣೆ ಆಚರಿಸಲಾಗುತ್ತದೆ. ನಾಳೆ ನಾನು, ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ದೆಹಲಿಗೆ ಹೋಗುತ್ತೇವೆ ಎಂದು ಹೇಳಿದ್ದಾರೆ.
ಟಿವಿ9ಗೆ ಸಮಾಜ ಕಲ್ಯಾಣ ಸಚಿವ ಹೆಚ್ಸಿ ಮಹದೇವಪ್ಪ ಪ್ರತಿಕ್ರಿಯಿಸಿದ್ದು, ದೇಶದ ಆರ್ಥಿಕತೆಯನ್ನ ಬಲಪಡಿಸುವಲ್ಲಿ ಶ್ರಮವಹಿಸಿದವರು. ಸಮಸಮಾಜ ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಸಂವಿಧಾನದ ಬಗ್ಗೆ ಅವರಿಗೆ ಆಳವಾದ ಜ್ಞಾನವಿತ್ತು. ಡಾ.ಮನಮೋಹನ್ ಸಿಂಗ್ ನಿಧನ ರಾಷ್ಟ್ರಕ್ಕೆ ತುಂಬಲಾರದ ನಷ್ಟ. ಅವರಿಗೆ ದೇಶದ ಹಿತವೇ ಮುಖ್ಯವಾಗಿತ್ತು ಎಂದಿದ್ದಾರೆ.
ಡಾಮನಮೋಹನ್ ಸಿಂಗ್ ಸರಳ, ಸಜ್ಜನಿಕೆಯ ರಾಜಕಾರಣಿ: ಸಚಿವ ಮುನಿಯಪ್ಪ
ಸಚಿವ ಮುನಿಯಪ್ಪ ಕೂಡ ಸಂತಾಪ ಸೂಚಿಸಿದ್ದು, ಡಾ.ಮನಮೋಹನ್ ಸಿಂಗ್ ನಿಧನ ದೇಶಕ್ಕೆ ತುಂಬಲಾರದ ನಷ್ಟ. ಅವರ ನಿಧನ ಸುದ್ದಿಯಿಂದ ದಿಗ್ಬಮ್ರೆಯಾದೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕೆಲಸ ಮಾಡಿದ್ದೇವೆ. ಅವರ ಸರಳ, ಸಜ್ಜನಿಕೆಯ ರಾಜಕಾರಣಿ. ಮಹಾನಚೇತನ್, ಅರ್ಥಶಾಸ್ತ್ರಜ್ಞನನ್ನ ದೇಶ ಕಳೆದುಕೊಂಡಿದೆ.
ಅರ್ಥ ಸಚಿವರಾಗಿ ಕಷ್ಟದಲ್ಲಿದ್ದ ದೇಶವನ್ನ ಬಲಿಷ್ಠವಾಗಿಸಿದ್ದರು. ಅವರ ಜತೆಯಲ್ಲಿ ಕೆಲಸ ಮಾಡಿರುವುದು ನಮ್ಮ ಸೌಭಾಗ್ಯ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಆ ಭಗವಂತ ನೀಡಲಿ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದಿದ್ದಾರೆ.