ಬೆಳಗಾವಿ,ಡಿ.13 : ವಿಮಾನದಲ್ಲಿ ಗೋವಾದಿಂದ ಹೊಸದಿಲ್ಲಿಗೆ ತೆರಳುತ್ತಿದ್ದ ವಿದೇಶಿ ಯುವತಿಯೊಬ್ಬರ ಪ್ರಾಣ ಉಳಿಸಿ, ಖಾನಾಪುರ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಮಾನವೀಯತೆ ಮೆರೆದಿದ್ದಾರೆ ಘಟನೆ ನಡೆದಿದೆ.
ವಿಮಾನದಲ್ಲಿ ಅಮೆರಿಕದ ಯುವತಿಯೊಬ್ಬರು ನಡು ಆಕಾಶದಲ್ಲಿ ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದರು. ಇದನ್ನು ನೋಡಿ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಬಂದು ಯುವತಿಯ ಪ್ರಾಣ ಉಳಿಸಿ ಅವಳ ಪಾಲಿಗೆ ‘ದೇವರ ಆಗಿದ್ದಾರೆ. ವಿಮಾನಯಾನದ ವೇಳೆ ಎರಡು ಬಾರಿ ಕುಸಿದು ಬಿದ್ದ ಯುವತಿಗೆ ತಕ್ಷಣದ ಸಿಪಿಆರ್ ಚಿಕಿತ್ಸೆ ನೀಡಿ ಪ್ರಾಣ ಉಳಿಸುವಲ್ಲಿ ಡಾ. ಅಂಜಲಿ ಯಶಸ್ವಿಯಾಗಿದ್ದಾರೆ. ಅವರ ಈ ಸಮಯಪ್ರಜ್ಞೆ ಕಾರ್ಯಕ್ಕೆ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ಎದ್ದು ನಿಂತು ಗೌರವ ಸಲ್ಲಿಸಿದ್ದು ವಿಶೇಷವಾಗಿತು.
ಗೋವಾ ರಾಜ್ಯದ ಎಐಸಿಸಿ ಕಾರ್ಯದರ್ಶಿಯೂ ಆಗಿರುವ ಡಾ. ಅಂಜಲಿ ನಿಂಬಾಳ್ಕರ್ ಅವರು ವಿಮಾನದ ಮೂಲಕ ದಿಲ್ಲಿಗೆ ಪ್ರಯಾಣಿಸುತ್ತಿದ್ದರು. ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ, ಸಹ ಪ್ರಯಾಣಿಕರಾಗಿದ್ದ ಅಮೆರಿಕ ಮೂಲದ ಯುವತಿಯೊಬ್ಬರು ಪ್ರಜ್ಞಾಹೀನರಾಗಿ ಕುಸಿದು ಬಿದ್ದಿದ್ದರು. ತಕ್ಷಣವೇ ಅಂಜಲಿ ಅವರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಆಕೆಯ ನೆರವಿಗೆ ಧಾವಿಸಿದರು. ಯುವತಿ ಸ್ಥಿತಿ ಚಿಂತಾಜನಕವಾಗಿದ್ದು, ಈ ವೇಳೆ ಎದೆಗುಂದದ ಅಂಜಲಿ ಅವರು, ತಮ್ಮ ವೈದ್ಯಕೀಯ ಅನುಭವವನ್ನು ಬಳಸಿ ಕೂಡಲೇ ‘ಕಾರ್ಡಿಯೋ–ಪಲ್ಮನರಿ ರಿಸಸ್ಸಿಟೇಷನ್’ (ಸಿಪಿಆರ್) ಚಿಕಿತ್ಸೆ ನೀಡಲು ಆರಂಭಿಸಿದರು. ಅವರ ಸತತ ಪ್ರಯತ್ನದ ಫಲವಾಗಿ ಯುವತಿಯ ಉಸಿರಾಟ ಮರುಕಳಿಸಿತು. ಕೇವಲ ಚಿಕಿತ್ಸೆ ನೀಡುವುದಷ್ಟೇ ಅಲ್ಲದೆ, ದಿಲ್ಲಿ ತಲುಪುವವರೆಗೂ ಆ ಯುವತಿಯ ಪಕ್ಕದಲ್ಲೇ ನಿಂತು, ನಿರಂತರವಾಗಿ ಆರೋಗ್ಯದ ಮೇಲ್ವಿಚಾರಣೆ ನಡೆಸಿದರು.
ಅಷ್ಟೇ ಅಲ್ಲ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಡಾ. ಅಂಜಲಿ ನಿಂಬಾಳ್ಕರ್ ಅವರು, ವಿಮಾನ ದಿಲ್ಲಿಯಲ್ಲಿ ಲ್ಯಾಂಡ್ ಆಗುವ ಮುನ್ನವೇ ಅಧಿಕಾರಿಗಳನ್ನು ಸಂಪರ್ಕಿಸಿ ತುರ್ತು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಸಿದ್ದರು. ವಿಮಾನ ನಿಲ್ದಾಣ ತಲುಪಿದ ಕೂಡಲೇ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸುವ ವ್ಯವಸ್ಥೆಯನ್ನು ಖುದ್ದಾಗಿ ನಿಂತು ಮಾಡಿಸಿದರು.
ಜೀವ ಉಳಿಸಿದ ವೈದ್ಯೆಗೆ ಪ್ರಯಾಣಿಕರ ಚಪ್ಪಾಳೆ:
ವೃತ್ತಿಪರ ವೈದ್ಯೆಯಾಗಿ ಜೀವ ಉಳಿಸಿದ ಡಾ. ಅಂಜಲಿ ಅವರ ಕಾರ್ಯವೈಖರಿಯನ್ನು ವಿಮಾನದ ಪೈಲಟ್ ಹಾಗೂ ಸಿಬ್ಬಂದಿ ಮುಕ್ತಕಂಠದಿಂದ ಶ್ಲಾಘಿಸಿದರು. ಸಹಪ್ರಯಾಣಿಕರು ಈ ಘಟನೆಯನ್ನು ಕಂಡು, ಅಂಜಲಿ ಅವರ ಸಮಯಪ್ರಜ್ಞೆಗೆ ಧನ್ಯವಾದ ಅರ್ಪಿಸಿದರು.


