ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ ಮತ್ತು ದೆಹಲಿಯ ಮಾಜಿ ಸಚಿವ ಸತ್ಯೇಂದ್ರ ಜೈನ್ ಅವರು ಇಂದು ಬೆಳಿಗ್ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ಇಂದು ಸಂಜೆ ಅವರು ತಿಹಾರ್ ಜೈಲಿನಿಂದ ಹೊರನಡೆದಿದ್ದಾರೆ. ಜಾಮೀನು ಪಡೆದ ನಂತರ ಸತ್ಯೇಂದ್ರ ಜೈನ್ ಅವರು ನ್ಯಾಯಾಲಯದ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ್ದು, ಇದು ಸತ್ಯದ ವಿಜಯ, “ಸತ್ಯಮೇವ ಜಯತೆ” ಎಂದು ಬಣ್ಣಿಸಿದ್ದಾರೆ.
ವೈದ್ಯಕೀಯ ಕಾರಣಗಳಿಗಾಗಿ ಮೇ 2023ರಲ್ಲಿ ಸುಪ್ರೀಂ ಕೋರ್ಟ್ ಸತ್ಯೇಂದ್ರ ಜೈನ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಈ ವರ್ಷದ ಮಾರ್ಚ್ನಲ್ಲಿ ನಿಯಮಿತ ಜಾಮೀನು ಕೋರಿಕೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತರ ಅವರು ದೆಹಲಿಯ ತಿಹಾರ್ ಜೈಲಿಗೆ ಮರಳಿದ್ದರು.