ತಂತ್ರಜ್ಞಾನದ ಜೊತೆ ಪತ್ರಕರ್ತರು ಹೊಂದಿಕೊಳ್ಳಬೇಕು: ಇಸ್ರೋ ಮಾಜಿ ಅಧ್ಯಕ್ಷರ ಸಲಹೆ

Ravi Talawar
ತಂತ್ರಜ್ಞಾನದ ಜೊತೆ ಪತ್ರಕರ್ತರು ಹೊಂದಿಕೊಳ್ಳಬೇಕು: ಇಸ್ರೋ ಮಾಜಿ ಅಧ್ಯಕ್ಷರ ಸಲಹೆ
WhatsApp Group Join Now
Telegram Group Join Now

ನಿವೃತ್ತಿ ನಂತರವೂ ಪತ್ರಕರ್ತರು ಕ್ರೀಯಾಶೀಲವಾಗಿರಲು ವಿಶ್ವೇಶ್ವರ ಭಟ್ ಕರೆ

 

ಬೆಂಗಳೂರು: ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ಜೊತೆಗೆ ಪತ್ರಕರ್ತರು ಅಧ್ಯಯನಶೀಲರಾಗಿ ಹೊಂದಿಕೊಳ್ಳಬೇಕು ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಸಲಹೆ ನೀಡಿದ್ದಾರೆ. ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘ (ಕೆಯೂಡಬ್ಲ್ಯೂಜೆ) ಮತ್ತು ಪ್ರೆಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಪ್ರೆಸ್‌ಕ್ಲಬ್ನಲ್ಲಿ ಟಿಎಸ್‌ಆರ್-ಮೊಹರೆ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ಮಾಧ್ಯಮ ಅಕಾಡೆಮಿ ಸದಸ್ಯರನ್ನು ಅಭಿನಂದಿಸಿ ಮಾತನಾಡಿದರು.

ರೋಬಟ್ ಮೂಲಕ ಕೆಲಸ ಮಾಡಿಸುವ ಮತ್ತು ಆಪರೇಷನ್ ಕೂಡ ಮಾಡಿಸುವ ಹಂತಕ್ಕೆ ತಂತ್ರಜ್ಞಾನ ಬಳಕೆ ಆಗುತ್ತಿದೆ. ಕೃತಕ ಬುದ್ದಿಮತ್ತೆ ಸಂಚಲನ ಮೂಡಿಸಿದೆ. ಈ ಹೊತ್ತಿನಲ್ಲಿ ಹಲವು ಸವಾಲುಗಳು ನಮ್ಮ ಮುಂದಿವೆ. ಸಮಾಜಕ್ಕೆ ಅಗತ್ಯವಿರುವ ವಿಷಯಗಳ ಬಗ್ಗೆ ಪರಾಮರ್ಶೆ ಮಾಡಿ ತಲುಪಿಸುವ ಮಹತ್ವದ ಜವಬ್ದಾರಿ ಪತ್ರಕರ್ತರದ್ದಾಗಿದೆ ಎಂದರು.

ಪತ್ರಕರ್ತರು ತಮ್ಮ ವೃತ್ತಿಯ ಮೂಲಕ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಕಾಯಕ ನಿಜಕ್ಕೂ ಶ್ರೇಷ್ಠವಾಗಿದೆ ಎಂದ ಅವರು, ಪ್ರಶಸ್ತಿ ಪುರಸ್ಕೃತರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಮುದ್ರಣ ಮಾಧ್ಯಮದಲ್ಲಿ ಸುದ್ದಿಯ ವ್ಯಾಖ್ಯಾನವೇ ಬದಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಸುದ್ದಿಮನೆಯಲ್ಲಿ ಕೆಲಸ ಮಾಡಿ ನಿವೃತ್ತರಾದ ಪತ್ರಕರ್ತರ ಬಗ್ಗೆಯೂ ವೃತ್ತಿಯಲ್ಲಿರುವ ಪತ್ರಕರ್ತರು ಇಟ್ಟುಕೊಂಡಿರುವ ಧೋರಣೆಗಳು ಬದಲಾಗಬೇಕು. ಓದುಗರ ಆಸಕ್ತಿಯ ಪತ್ರಿಕೋದ್ಯಮದ ಈ ಕಾಲಘಟದಲ್ಲಿ ನಿವೃತ್ತ ಪತ್ರಕರ್ತರ ಮಾಗದರ್ಶನವೂ ಮಾಧ್ಯಮಕ್ಕಿಂದು ಮುಖ್ಯವಾಗಿದೆ ಎಂದರು.

ಸಾಮಾನ್ಯ ಹಿನ್ನೆಲೆಯಿಂದ ಬಂದ ಟಿಎಸ್‌ಆರ್ ಅವರು ಸುದೀರ್ಘ ಅವಧಿಯಲ್ಲಿ ಪ್ರಜಾವಾಣಿ ಪತ್ರಿಕೆ ಸಂಸ್ಥೆಯಲ್ಲೇ ದುಡಿದು, ಆ ಪತ್ರಿಕೆಯನ್ನು ಕಟ್ಟಿ ಬೆಳೆಸಿದ ಕೀರ್ತಿಗೆ ಭಾಜನರಾದವರು ಹಾಗೂ ಮೊಹರೆಯವರು ಸಂಯುಕ್ತ ಕರ್ನಾಟಕ ಪತ್ರಿಕೆಗೆ ಭದ್ರ ಬುನಾದಿಯನ್ನು ಹಾಕಿದವರು. ಅವರಿಬ್ಬರ ಸ್ಮರಣಾರ್ಥ ಸರ್ಕಾರದ ವಾರ್ತಾ ಇಲಾಖೆ ನೀಡುತ್ತಿರುವ ಈ ಎರಡೂ ಪ್ರಶಸ್ತಿಗಳನ್ನು ಕನ್ನಡದ ಪುಲಿಟ್ಜೆರ್ ಪ್ರಶಸ್ತಿಗಳಾಗಿವೆ ಎಂದರು.

ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಯಾದ ಕೆಯುಡಬ್ಲೂೃಜೆಗೆ ಶಿವಾನಂದ ತಗಡೂರು ಸಾರಥ್ಯ ವಹಿಸಿದ ಮೇಲೆ ಮಹತ್ವದ ಕೆಲಸಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರೆಸ್ ಕ್ಲಬ್ ಕೂಡ ಇಂಥಹ ಕಾರ್ಯಕ್ರಮ ಆಯೋಜಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಪ್ರಸ್ತಾವಿಕ ಭಾಷಣ ಮಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸುದ್ದಿಮನೆಯಲ್ಲಿ ಸದಾ ಸುದ್ದಿ ಮಾಡಿರುವ ಮತ್ತು ಸುದ್ದಿ ಮಾಡುತ್ತಿರುವ ಪತ್ರಕರ್ತರನ್ನು ಗೌರವಿಸುವ ಕೆಲಸವನ್ನು ಮಾಡಲಾಗುತ್ತಿದೆ. ಕಳೆದೆರಡು ವರ್ಷಗಳಿಂದ ನಿವೃತ್ತ ಪತ್ರಕರ್ತರ ಮನೆಗಳಿಗೆ ತೆರಳಿ ಅವರ ’ಮನೆಯಂಗಳದಲ್ಲಿ ಮನದುಂಬಿ ನಮನ’ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿದೆ. ಇಂದು ಕೂಡ ಹಿರಿಯ ವೃತ್ತಿ ಬಾಂಧವರನ್ನು ಅಭಿನಂದಿಸಲು ಎರಡೂ ಸಂಸ್ಥೆಗಳು ಹೆಮ್ಮೆ ಪಡುತ್ತಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಕೆ.ಶ್ರೀಧರ್, ಪತ್ರಿಕೋದ್ಯಮವು ಹೊರಳು ದಾರಿಗೆ ಹೋಗುವ ಜೊತೆಗೆ ಒರಟು ದಾರಿಗೆ ಹೋಗಲು ಅವಕಾಶ ನೀಡಬಾರದು ಎಂದರು.

ಕಾರ್ಯಕ್ರಮದಲ್ಲಿ ಟಿಎಸ್‌ಆರ್ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಾದ ಶಿವಾಜಿ .ಎಸ್. ಗಣೇಶನ್ ಶ್ರೀಕಾಂತಾಚಾರ್ಯ ಮಣೂರ, ಡಾ.ಆರ್.ಪೂರ್ಣಿಮಾ, ಮೊಹರೆ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರಾದ ಇಂದೂಧರ ಹೊನ್ನಾಪುರ, ಎನ್.ಮಂಜುನಾಥ್, ಚಂದ್ರಶೇಖರ ಪಾಲೆತ್ತಾಡಿ, ಶಿವಲಿಂಗಪ್ಪ ದೊಡ್ಡಮಣಿ ಅವರನ್ನು ಇಸ್ರೋ ಮಾಜಿ ಅಧ್ಯಕ್ಷರಾದ ಕಿರಣ್ ಕುಮಾರ್ ಅಭಿನಂದಿಸಿದರು.

ಕರ್ನಾಟಕ ಮಾಧ್ಯಮ ಅಕಾಡಮಿ ಸದಸ್ಯರಾಗಿ ನೇಮಕಗೊಂಡಿರುವ ಶಿವಾನಂದ ತಗಡೂರು,

ಎಂ.ಸಿ. ಶೋಭಾ, ಅಬ್ಬಾಸ್ ಮುಲ್ಲ, ಎಚ್.ವಿ. ಕಿರಣ್, ಅನಿಲ್ ಗೆಜ್ಜಿ, ಕೆಂಚೇಗೌಡ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಹಿರಿಯ ಪತ್ರಕರ್ತರಾದ ಪದ್ಮರಾಜ ದಂಡಾವತಿ, ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಸದಾಶಿವ ಶೆಣೈ, ಕೆಯುಡಬ್ಲೃಜೆ ಪದಾಧಿಕಾರಿಗಳಾದ ಎಚ್.ಬಿ.ಮದನಗೌಡ, ಎನ್.ರವಿಕುಮಾರ್, ದೇವರಾಜ್, ಶಿವರಾಜ್, ಪ್ರೆಸ್ ಕ್ಲಬ್ ಪದಾಧಿಕಾರಿಗಳಾದ ಮೋಹನ್ ಕುಮಾರ್, ಮಂಜುನಾಥ್ ಮತ್ತಿತರರು ಹಾಜರಿದ್ದರು.

ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಸ್ವಾಗತಿಸಿದರು. ಕೊನೆಯಲ್ಲಿ ಕೆ.ಯೂ.ಡಬ್ಲ್ಯೂ.ಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ವಂದಿಸಿದರು. ಹಿರಿಯ ಪತ್ರಕರ್ತ ಹರೀಶ್ ನಾಗರಾಜು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕೆ.ಯೂ.ಡಬ್ಲ್ಯೂ.ಜೆ.ನ ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಯ ಪದಾಧಿಕಾರಿಗಳು ಮತ್ತು ಪ್ರೆಸ್ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು

WhatsApp Group Join Now
Telegram Group Join Now
Share This Article