ಬೆಂಗಳೂರು,23: ಸಿಇಟಿ ಪರೀಕ್ಷೆಯಲ್ಲಿ ಭಾರೀ ಸಂಖ್ಯೆಯ ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವುದರಿಂದ ಉಂಟಾಗಿರುವ ಗೊಂದಲ, ಆತಂಕ ನಿವಾರಣೆಗೆ ರಾಜ್ಯ ಸರ್ಕಾರ ಕೊನೆಗೂ ಮುಂದಾಗಿದ್ದು, ಯಾವ್ಯಾವ ವಿಷಯದಲ್ಲಿ ಎಷ್ಟೆಷ್ಟು ಪಠ್ಯೇತರ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ವಿಷಯವಾರು ಪ್ರತ್ಯೇಕ ತಜ್ಞರ ಸಮಿತಿ ರಚಿಸಿದೆ.
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಯಿಂದ ಏ.18 ಮತ್ತು 19ರಂದು ನಡೆಸಲಾಗಿತ್ತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ಸೇರಿದಂತೆ ನಾಲ್ಕು ವಿಷಯಗಳಲ್ಲಿ ನಡೆಸಲಾಗಿತ್ತು. ರಾಜ್ಯಾದ್ಯಂತ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಪರೀಕ್ಷೆಯ ಬಳಿಕ ಪತ್ರಿಕೆಗಳ ಹಲವಾರು ಪ್ರಶ್ನೆಗಳು ಸಿಇಟಿಯ ವಠ್ಯಕ್ರಮದ ಹೊರತಾಗಿವೆ ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.
ಅನೇಕ ಪ್ರಶ್ನೆಗಳು ವಠ್ಯಕ್ರಮದ ಹೊರತಾಗಿರುವ ಕಾರಣ ಇದು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಗ್ರೇಸ್ ಅಂಕಗಳನ್ನು ಒದಗಿಸುವಂತೆ ಅಥವಾ ಪರೀಕ್ಷೆಯನ್ನು ಮರು ನಡೆಸುವಂತೆ ಬೇಡಿಕೆಗಳನ್ನೂ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಕೆಇಎಯು ವಿದ್ಯಾರ್ಥಿಗಳಿಗೆ ಏಪ್ರಿಲ್ 27ರವರೆಗೆ ಅವಕಾಶ ನೀಡಿದೆ.
ಈ ಸಂಬಂಧ ಸರ್ಕಾರಕ್ಕೆ ವಿಸ್ತ್ರತ ವರದಿ ಸಲ್ಲಿಸುವಂತೆ ‘ಕೆಇಎ’ ಗೆ ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀಕರ್ ಎಂ ಎಸ್ ತಿಳಿಸಿದ್ದಾರೆ.
ಏತನ್ಮಧ್ಯೆ, ಈ ಪ್ರಕರಣದ ಬಗ್ಗೆ ಸರ್ಕಾರವು ಪರಿಶೀಲನೆ ನಡೆಸಿದ್ದು, ಸಿಇಟಿಯ ಪಠ್ಯಕ್ರಮದಿಂದ ಹೊರತಾಗಿರುವ ಪ್ರಶ್ನೆಗಳ ಸಂಖ್ಯೆಗಳನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಪ್ರತಿ 4 ವಿಷಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ತಜ್ಞರ ಸಮಿತಿಯನ್ನು ರಚಿಸಿದೆ. ತಜ್ಞರ ಸಮಿತಿಯು ತನ್ನ ವರದಿಯನ್ನು ತಕ್ಷಣವೇ ನೀಡುವಂತೆ ಆದೇಶಿಸಿದೆ.
ಸಿಇಟಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ‘ಕೆಇಎ’ ಯು ಕಾರ್ಯನಿರ್ವಹಿಸಲಿದೆ. ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ಈ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆಯು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.