ಬೆಂಗಳೂರು, ಏಪ್ರಿಲ್ 9: ಕರ್ನಾಟಕ ದ್ವಿತೀಯ ಪಿಯು ಪಿಯುಸಿ ಪರೀಕ್ಷೆ ಫಲಿತಾಂಶ (Second PU Result) ಮಂಗಳವಾರ ಪ್ರಕಟಗೊಂಡಿದ್ದು ಒಟ್ಟಾರೆಯಾಗಿ ಶೇಕಡ 73.45 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮತ್ತೊಂದೆಡೆ, ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಎರಡು ಹಾಗೂ ಮೂರನೆಯ ಪರೀಕ್ಷೆಗೆ ಶುಲ್ಕರಹಿತ ವ್ಯವಸ್ಥೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಭರವಸೆ ನೀಡಿದ್ದಾರೆ. ಇಷ್ಟಾದರೂ, ಅನುತ್ತೀರ್ಣಗೊಂಡ (PUC Result) ಹಾಗೂ ನಿರೀಕ್ಷಿಸಿದ ಅಂಕ ಬಂದಿಲ್ಲವೆಂದು ನೊಂದ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಲವು ಜಿಲ್ಲೆಗಳಲ್ಲಿ ನಡೆದಿದೆ.
ಪಿಯು ಫಲಿತಾಂಶ: ನಿರೀಕ್ಷಿಸಿದ ಅಂಕ ಬಂದಿಲ್ಲವೆಂದು ನೊಂದ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ

ಒಟ್ಟಾರೆಯಾಗಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆದ ಹಾಗೂ ಫೇಲ್ ಆಗುವ ಭಯದಲ್ಲಿ ಕರ್ನಾಟಕದಾದ್ಯಂತ ಐವರು ವಿದ್ಯಾರ್ಥಿನಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೈಸೂರು ಜಿಲ್ಲೆಯ ಒಂಟಿಕೊಪ್ಪಲ್ಲಿನ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನೊಂದು ಕಡೆ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಅಗಸನೂರು ಎಂಬಲ್ಲಿ ವಿಜಯಲಕ್ಷ್ಮಿ ಸಿರಗುಪ್ಪದ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.