ಶ್ರೀನಗರ: ಭಾರತದ ಚುನಾವಣಾ ಆಯೋಗದ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ಮತದಾನದಲ್ಲಿ ಇಂದು ಬುಧವಾರ ಬೆಳಗ್ಗೆ 9 ಗಂಟೆಯ ಹೊತ್ತಿಗೆ ಶೇಕಡಾ 11.11 ರಷ್ಟು ಮತದಾನವಾಗಿದೆ.
ECA ನೀಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಕಿಶ್ತ್ವಾರ್ನಲ್ಲಿ ಬೆಳಗ್ಗೆ 9 ಗಂಟೆಗೆ ಶೇಕಡಾ 14.83ರಷ್ಟು ಮತದಾನವಾಗಿದ್ದು, ಪುಲ್ವಾಮಾದಲ್ಲಿ ಶೇಕಡಾ 9.18 ರಷ್ಟು ಮತದಾನವಾಗಿದೆ. ಇನ್ನು ಅನಂತನಾಗ್ ಜಿಲ್ಲೆಯಲ್ಲಿ ಶೇ.10.26, ದೋಡಾ ಶೇ.12.90, ಕುಲ್ಗಾಮ್ ಶೇ.10.77, ರಾಂಬನ್ ಶೇ.11.91 ಮತ್ತು ಶೋಪಿಯಾನ್ ಶೇ.11.44 ಮತದಾನವಾಗಿದೆ.
ಜಿಲ್ಲಾ ಚುನಾವಣಾಧಿಕಾರಿ, ದೋಡಾ ಹರ್ವಿಂದರ್ ಸಿಂಗ್, ಮತಗಟ್ಟೆಗಳಲ್ಲಿ ಮತದಾನ ಸಾಂಗವಾಗಿ ಸಾಗುತ್ತಿದ್ದು, ಜನರು ಮತ ಚಲಾಯಿಸಲು ಉತ್ಸಾಹ ತೋರುತ್ತಿದ್ದಾರೆ. ಈ ಬಾರಿ ದಾಖಲೆಯ ಮತದಾನವಾಗುತ್ತದೆ ಎಂದು ಭಾವಿಸುತ್ತೇವೆ. ಇನ್ನೂ ಮತದಾನ ಮಾಡದಿರುವವರು ಬೇಗನೆ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸಿ ಎಂದು ಕೇಳಿಕೊಂಡಿದ್ದಾರೆ.
ಮತದಾರರು, ವಿಶೇಷವಾಗಿ ಮಹಿಳೆಯರು ಮತ್ತು ವೃದ್ಧರು ತಮ್ಮ ತಮ್ಮ ಮತಗಟ್ಟೆಗಳ ಹೊರಗೆ ಮುಂಜಾನೆ ಸರತಿ ಸಾಲಿನಲ್ಲಿ ನಿಂತಿದ್ದರು. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗುವ ಮುನ್ನವೇ ಹಲವು ಬೂತ್ಗಳಲ್ಲಿ ಉದ್ದನೆಯ ಸರತಿ ಸಾಲುಗಳು ಕಂಡುಬಂದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.