ದೇವನಹಳ್ಳಿ02: ವಿಮಾನ ನಿಲ್ಲುವ ಮೊದಲೇ ವಿಮಾನದ ತುರ್ತು ಬಾಗಿಲು ತೆಗೆಯಲು ಯತ್ನಿಸಿದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಕೋಲ್ಕತ್ತಾದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ, ವಿಮಾನ ನಿಲ್ಲುವ ಮೊದಲೇ ವಿಮಾನದ ತುರ್ತು ಬಾಗಿಲು ತೆಗೆಯಲು ಪ್ರಯಾಣಿಕ ಯತ್ನಿಸಿದ್ದು, ಆತನ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಕಾಯ್ದೆ) ಅಡಿ ಪ್ರಕರಣವನ್ನು ದಾಖಲು ಮಾಡಲಾಗಿದೆ.
ಸೋಮವಾರ ರಾತ್ರಿ ಘಟನೆ ನಡೆದಿದ್ದು, ಘಟನೆ ಸಂಬಂಧಿಸಿದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪಶ್ಕಿಮ ಬಂಗಾಳದ ಬಂಕುರಾದ ಕೌಶಿಕ್ ಕರಣ್ (22) ವಿರುದ್ಧ ಪ್ರಕರಣ ದಾಖಲಾಗಿದೆ.
ಇಂಡಿಗೋ ಸಂಸ್ಥೆ ದಾಖಲಿಸಿರುವ ದೂರಿನ ಪ್ರಕಾರ, ಕೌಶಿಕ್ ಕರಣ್ ವಿಮಾನದ ಸೀಟ್ ಸಂಖ್ಯೆ 18ರಲ್ಲಿ ಕುಳಿತಿದ್ದರು. ಕೋಲ್ಕತ್ತಾದಿಂದ ಬೆಂಗಳೂರಿನತ್ತ ವಿಮಾನ ಬರುವಾಗ ವಿಮಾನ ನಿಲ್ಲುವ ಮೊದಲೇ ತುರ್ತು ನಿರ್ಗಮನದ ಬಾಗಿಲು ತೆಗೆಯಲು ಯತ್ನಿಸುತ್ತಿರುವುದು ಕ್ಯಾಬಿನ್ ಸಿಬ್ಬಂದಿಯ ಗಮನಕ್ಕೆ ಬಂದಿದೆ. ತಕ್ಷಣವೇ ಆತನನ್ನು ಭದ್ರತಾ ಸಿಬ್ಬಂದಿಯ ವಶಕ್ಕೆ ನೀಡಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಆತ ವಿಮಾನದಲ್ಲಿ ಮೊದಲ ಸಲ ಪ್ರಯಾಣಿಸುತ್ತಿರುವುದು ಗಮನಕ್ಕೆ ಬಂದಿದೆ. ವಿಮಾನದಿಂದ ನಿರ್ಗಮಿಸುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ಆತನಿಗೆ ತಿಳಿದಿರಲಿಲ್ಲ. ಉದ್ದೇಶಪೂರ್ವಕವಾಗಿ ಆತ ತುರ್ತು ನಿರ್ಗಮನದ ಬಾಗಿಲು ತೆಗೆಯಲು ಯತ್ನಿಸಿಲ್ಲ. ಸೀಟ್ನಿಂದ ಎದ್ದೇಳುವಾಗ ತುರ್ತು ನಿರ್ಗಮನದ ಬಾಗಿಲು ಹಿಡಿದಿದ್ದಾನೆಂದು ತಿಳಿದು ಬಂದಿದೆ.
ಆತ ಬೆಂಗಳೂರಿನಲ್ಲಿ ಸಂಬಂಧಿಕರನ್ನು ಭೇಟಿ ಮಾಡುವ ಸಲುವಾಗಿ ಪ್ರಯಾಣಿಸಿದ್ದ, ಸಮನ್ಸ್ ಬಂದಾಗ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.