ಮಾಜಿ ಸಂಸದ, ದಿ. ಸಿದ್ನಾಳ್ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್

Ravi Talawar
ಮಾಜಿ ಸಂಸದ, ದಿ. ಸಿದ್ನಾಳ್ ಕುಟುಂಬ ಸದಸ್ಯರ ವಿರುದ್ಧ ಎಫ್‌ಐಆರ್
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿಯ ಪ್ರಭಾವಿ ರಾಜಕಾರಣಿ, ನಾಲ್ಕು ಬಾರಿ ಸಂಸದರಾಗಿದ್ದ ದಿ. ಎಸ್ ಬಿ ಸಿದ್ನಾಳ್ ಕುಟುಂಬ ಸದಸ್ಯರ ವಿರುದ್ಧ ಬೆಳಗಾವಿ ಪೊಲೀಸ್ ಅಧಿಕಾರಿಗಳು FIR ದಾಖಲಿಸಿದ್ದಾರೆ.

ವಾಮಾಚಾರ ಆರೋಪದಡಿ ಎಫ್ಐಆರ್ ದಾಖಲಾಗಿದ್ದು, ಸಿದ್ನಾಳ್ ಅವರ ಸೊಸೆ, ವಿಜಯ ಸಂಕೇಶ್ವರ್ ಅವರ ಪುತ್ರಿ ದೀಪಾ ಸಿದ್ನಾಳ್ ದೂರಿನ ಆಧಾರದಲ್ಲಿ ಈ ಪ್ರಕರಣ ದಾಖಲಾಗಿದೆ.ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೀಪಾ ಶಶಿಕಾಂತ್ ಸಿದ್ನಾಳ್, ತಮ್ಮ ಪತಿಯ ಸಹೋದರ ಶಿವಕಾಂತ್ ಸಿದ್ನಾಳ್ ಹಾಗೂ ಅವರ ಪತ್ನಿ ವಾಣಿ ಸಿದ್ನಾಳ್ ಮತ್ತು ಅವರ ಪುತ್ರ ದಿಗ್ವಿಜಯ ಸಿದ್ನಾಳ್ ವಿರುದ್ಧ ವಾಮಾಚಾರದ ಆರೋಪ ಹೊರಿಸಿದ್ದು, ಇದೇ ಕಾರಣದಿಂದಾಗಿ ಕೆಲವು ತಿಂಗಳ ಹಿಂದೆ ತಮ್ಮ ಪತಿ ಮೃತಪಟ್ಟಿದ್ದಾರೆ ಎಂದು ದೂರಿದ್ದಾರೆ. ಇದಷ್ಟೇ ಅಲ್ಲದೇ ತಮ್ಮ ಆಸ್ತಿಯನ್ನು ಕಸಿದುಕೊಳ್ಳುವುದಕ್ಕಾಗಿಯೂ ಈ ಮೂವರೂ ವಾಮಾಚಾರವೆಸಗಿದ್ದಾರೆ ಎಂದು ದೀಪಾ ಸಿದ್ನಾಳ್ ಹೇಳಿದ್ದಾರೆ.

ನೆಗಿನಹಾಳ್ ನಲ್ಲಿರುವ ಶಶಿಕಾಂತ್ ಸಿದ್ನಾಳ್ ಅವರು ಸ್ಥಾಪಿಸಿದ್ದ ವಿಜಯಕಾಂತ್ ಡೈರಿಯನ್ನು ಲಪಟಾಯಿಸುವ ಸಂಚಿನಿಂದ ಈ ವಾಮಾಚಾರ ನಡೆಸಲಾಗಿದೆ ಎಂದು ದೀಪಾ ಆರೋಪಿಸಿದ್ದಾರೆ. ದೀಪಾ ಸಿದ್ನಾಳ್ ಡೈರಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದು ಕೆಲ ತಿಂಗಳ ಹಿಂದೆ ಅನಾರೋಗ್ಯದಿಂದ ಶಶಿಕಾಂತ್ ಸಿದ್ನಾಳ್ ಮೃತಪಟ್ಟಿದ್ದರು.

ಕ್ಯಾಂಪ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅಲ್ತಾಫ್ ಮುಲ್ಲಾ ಅವರ ಪ್ರಕಾರ, ಹಲವಾರು ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ, ಮುಖ್ಯವಾಗಿ ಸಿದ್ನಾಳ್ ಕುಟುಂಬದ ಮೂರು ಸದಸ್ಯರ ವಿರುದ್ಧ ಐಪಿಸಿ ಸೆಕ್ಷನ್ 120-ಬಿ, 506, 37 ಮತ್ತು ಅಮಾನವೀಯ ದುಷ್ಟ ಪದ್ಧತಿಗಳ ತಡೆಗಟ್ಟುವಿಕೆ ಮತ್ತು ವಾಮಾಚಾರ ನಿರ್ಮೂಲನೆ ಸೆಕ್ಷನ್ 3 ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.

ಬೆಳಗಾವಿ ಪೊಲೀಸ್ ಕಮಿಷನರ್ ಐಡಾ ಮಾರ್ಟಿನ್ ಅವರು ಪ್ರಕರಣದ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆಯನ್ನು ಪ್ರಾರಂಭಿಸುತ್ತಾರೆ ಎಂದು ಹೇಳಿದ್ದಾರೆ. ಎರಡು ದಿನಗಳ ಹಿಂದೆ ಪ್ರಕರಣ ದಾಖಲಾಗಿದ್ದರೂ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಶಶ್ಕತ್ ಸಿದ್ನಾಳ್, ಮಾಜಿ ಸಂಸದ ಎಸ್ ಬಿ ಸಿದ್ನಾಳ್ ರವರ ಎರಡನೇ ಪುತ್ರರಾಗಿದ್ದು 2002 ರಲ್ಲಿ ದೀಪಾ ಅವರನ್ನು ವಿವಾಹವಾಗಿದ್ದರು, 2006 ರಲ್ಲಿ ವಿಜಯಕಾಂತ್ ಡೈರಿಯನ್ನು ಸ್ಥಾಪಿಸಿದರು. ಈ ಉದ್ಯಮವು ಹೆಚ್ಚು ಯಶಸ್ವಿಯಾಗಿತ್ತು ಮತ್ತು ಈ ಪ್ರದೇಶದ ಹಾಲು ಉತ್ಪಾದಕರಿಗೆ ಉತ್ತಮ ಅವಕಾಶವನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.

WhatsApp Group Join Now
Telegram Group Join Now
Share This Article