ಬೆಂಗಳೂರು: ಆರ್ ಆರ್ ನಗರ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ನಂದಿನಿ ಲೇಔಟ್ ಪೊಲೀಸರು 100-150 ಮಂದಿ ಅಪರಿಚಿತರ ವಿರುದ್ದ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಮುನಿರತ್ನ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದ್ದು, ದೂರಿನಲ್ಲಿ ಮಾಜಿ ಸಂಸದ ಡಿಕೆ.ಸುರೇಶ್, ಆರ್.ಆರ್.ನಗರದ ಕಾಂಗ್ರೆಸ್ ನಾಯಕಿ ಕುಸುಮಾ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಉಲ್ಲೇಖವಾಗಿದೆ ಎಂದು ತಿಳಿದುಬಂದಿದೆ. ತಮ್ಮನ್ನು 100-150 ಜನರ ಮೂಲಕ ಹತ್ಯೆಗೆ ಕಾಂಗ್ರೆಸ್ ನಾಯಕರು ಸಂಚು ನಡೆಸಿದ್ದಾರೆಂದು ಶಾಸಕರು ದೂರಿನಲ್ಲಿ ಆರೋಪಿಸಿದ್ದಾರೆ.
ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳುವಾಗ ಮುನಿರತ್ನ ಅವರ ಮೇಲೆ ಕಿಡಿಗೇಡಿಗಳು ಮೊಟ್ಟೆ ಎಸೆದಿದ್ದರು. ಘಟನೆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮುನಿರತ್ನ ಅವರು, ನಿನ್ನೆ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಈ ವೇಳೆ ತಮ್ಮ ಮೇಲೆ ಆ್ಯಸಿಡ್ ಮೊಟ್ಟೆ ಎಸೆದು ಕೊಲೆಗೆ ಯತ್ನಿಸಿದ್ದಾರೆಂದು ಆರೋಪಿಸಿ, ದೂರು ನೀಡಿದ್ದಾರೆ.
ಅ.10ರಂದು ರಾಜ್ಯಪಾಲರನ್ನು ಭೇಟ ಮಾಡಿ ನನ್ನನ್ನು ಕೊಲೆ ಮಾಡುವ ಸಂಚು ನಡೆಯುತ್ತಿದೆ ಎಂದು ದೂರು ನೀಡಿದ್ದೆ. ಆದರೆ, ಈ ವರೆಗೆ ನನಗೆ ಗನ್ ಮ್ಯಾನ್ ನೀಡಿಲ್ಲ. ಕೋರ್ಟ್ ನಲ್ಲಿ ಡಿ.5ರಂದು ನನಗೆ ಇಬ್ಬರು ವಕೀಲರ ವೇಷದಲ್ಲಿ ಬಂದು ಈಗಲೂ ಕಾಲ ಮಿಂಚಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡು. ಇಲ್ಲವಾದಲ್ಲಿ ನಿನ್ನ ಮೇಲ ಪೋಕ್ಸೋ ಕೇಸ್ ಹಾಕಿ ಮತ್ತೆ ಜೈಲಿಗೆ ಕಳುಹಿಸುತ್ತೇವೆ. ಆರ್.ಆರ್.ನಗರದಲ್ಲಿ ಕುಸುಮಾ ಶಾಸಕರಾಗಬೇಕು. ಮುಂದಿನ ದಿನಗಳಲ್ಲಿ ಹೆಬ್ಬಾಳ್ಕರ್ ರೀತಿ ಕುಸುಮಾರನ್ನೂ ಸಚಿವರನ್ನಾಗಿ ನೋಡಬೇಕು. ಹೆಬ್ಬಾಳ್ಕರ್ ರಂತೆ ಬೆಂಗಳೂರಿಗೆ ಕುಸುಮಾ ಇರಬೇಕೆಂದು ನಮ್ಮ ಅಣ್ಣ ಡಿಕೆ.ಸುರೇಶ್ ಆಸೆ ಎಂದು ಬೆದರಿಕೆ ಹಾಗಿದ್ದರು ಎಂದು ಆರೋಪಿಸಿದ್ದಾರೆ.
ಈ ನಡುವೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿದ್ದ ವಿಶ್ವನಾಥ್, ಕೃಷ್ಣಮೂರ್ತಿ ಮತ್ತು ಚಂದ್ರು ಅವರನ್ನು ಗುರುವಾರ ಸ್ಥಳೀಯ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದು, ಮೂವರಿಗೂ ಜಾಮೀನು ನೀಡಲಾಗಿದೆ ಎಂದು ತಿಳಿದುಬಂದಿದೆ.