ನವದೆಹಲಿ, ಏಪ್ರಿಲ್ 30: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನಲ್ಲಿರುವ ಪಹಲ್ಗಾಮ್ನಲ್ಲಿ ಉಗ್ರರ ದಾಳಿ ನಡೆದ ಬಳಿಕ ಪಾಕಿಸ್ತಾನವು ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಭಾರತೀಯ ಸೇನೆಗೆ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದೆ. ಸತತ ಆರನೇ ದಿನವೂ ರಾತ್ರಿ ಗಡಿಯಲ್ಲಿ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದ್ದು, ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. ಅಪ್ರಚೋದಿತ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನಿ ಪಡೆಗಳಿಗೆ ಸೂಕ್ತ ಉತ್ತರ ನೀಡಿದೆ.
ಪಾಕ್ ಸೇನೆಯು ಏಪ್ರಿಲ್ 29-30ರ ತಡರಾತ್ರಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ನೌಶೇರಾ, ಸುಂದರ್‌ಬಾನಿ ಮತ್ತು ಅಖ್ನೂರ್ ಸೆಕ್ಟರ್‌ಗಳ ಎದುರು ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿ ನಡೆಸಿದ್ದವು. ಭಾರತೀಯ ಸೇನಾ ಪಡೆಗಳು ತ್ವರಿತವಾಗಿ ಮತ್ತು ಪ್ರಮಾಣಾನುಗುಣವಾಗಿ ಪ್ರತಿಕ್ರಿಯಿಸಿದೆ.
ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಓರ್ವ ಸ್ಥಳೀಯ, 25 ಪ್ರವಾಸಿಗರು ಸೇರಿ 26 ಮಂದಿಸಾವನ್ನಪ್ಪಿದ್ದರು. ಇದಾದ ನಂತರ , ನಂತರ ಎರಡೂ ನೆರೆಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ ಇತ್ತೀಚಿನ ಬೆಳವಣಿಗೆ ಸಂಭವಿಸಿದೆ.
ಮಂಗಳವಾರ, ಜಮ್ಮು ಮತ್ತು ಕಾಶ್ಮೀರದ ಅಖ್ನೂರ್ ವಲಯದ ಜೊತೆಗೆ ಕುಪ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳ ಎದುರಿನ ಪ್ರದೇಶಗಳಲ್ಲಿ ಪಾಕಿಸ್ತಾನಿ ಪಡೆಗಳು ಕದನ ವಿರಾಮವನ್ನು ಉಲ್ಲಂಘಿಸಿವೆ. ಈ ಪ್ರಚೋದನೆಗಳಿಗೆ ಭಾರತೀಯ ಸೇನೆಯು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.