ಚೆನ್ನೈ (ತಮಿಳುನಾಡು): ಕ್ಷೇತ್ರ ಪುನರ್ವಿಂಗಡನೆ ಕುರಿತು ಆರಂಭದಿಂದಲೂ ಧ್ವನಿ ಎತ್ತಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಇದೀಗ ಈ ಕುರಿತು ಚರ್ಚೆಗೆ ತುರ್ತು ಸಭೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದಾರೆ. ರಾಜ್ಯದ ವಿವಿಧ ಪಕ್ಷದ ಸಂಸದರ ಜೊತೆ ಭೇಟಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಧಾನಿ ಭೇಟಿಗೆ ಮನವಿ ಕೋರಿ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಗೌರವಾನ್ವಿತ ಪ್ರಧಾನಿಗಳು ಕ್ಷೇತ್ರ ವಿಂಗಡನೆಗೆ ಸಂಬಂಧಿಸಿದ ನಮ್ಮ ಕಳವಳ ಕುರಿತು ಜ್ಞಾಪಕ ಪತ್ರವನ್ನು ಮಂಡಿಸಲು ರಾಜ್ಯಗಳ ವಿವಿಧ ಪಕ್ಷದ ಸಂಸದರೊಂದಿಗೆ ನಿಮ್ಮ ಜೊತೆಗೆ ಸಭೆ ಮಾಡಲು ಕೋರುತ್ತೇನೆ ಎಂದಿದ್ದಾರೆ. ಅಲ್ಲದೇ, ಈ ಸಭೆಯಲ್ಲಿ ಕಳೆದ ವಾರ ಚೆನ್ನೈನಲ್ಲಿ ನ್ಯಾಯಸಮ್ಮತ ಡಿಲಿಮಿಟೇಶನ್ ಕುರಿತು ವಿವಿದ ರಾಜ್ಯದ ನಾಯಕರ ಜೊತೆ ನಡೆದ ಜಂಟಿ ಕ್ರಿಯಾ ಸಮಿತಿಯ ನಿರ್ಣಯವನ್ನು ತಿಳಿಸಲಾಗುವುದು. ಈ ಹಿಂದೆ ಹೇಳಿದಂತೆ. ನಮ್ಮ ಜನರ ಬಗ್ಗೆ ಒಗ್ಗಟ್ಟಿನ ನಿಲುವಿನ ಕುರಿತು ನಿಮಗೆ ತಿಳಿಸುವ ಉದ್ದೇಶದಿಂದ ತುರ್ತು ಸಮಯಕ್ಕೆ ಕೋರುತ್ತಿದ್ದೇನೆ ಎಂದಿರುವ ಅವರು, ಪ್ರತಿಕ್ರಿಯೆಗೆ ಕಾದಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಮಾರ್ಚ್ 27ರಂದು ಕೂಡ ಸಿಎಂ ಸ್ಟಾಲಿನ್ ಪ್ರಧಾನಿಗೆ ಪತ್ರ ಬರೆದು ಭೇಟಿಗೆ ಸಮಯ ಕೋರಿದ್ದರು.
ಮಾರ್ಚ್ 22ರಂದು ಚೆನ್ನೈನಲ್ಲಿ ನಡೆದ ನ್ಯಾಯಸಮ್ಮತ ಕ್ಷೇತ್ರ ಪುನರ್ವಿಂಗಡನೆಗೆ ಆಗ್ರಹಿಸಿ ನಡೆದ ಜಂಟಿ ಕ್ರಿಯಾ ಸಮಿತಿಯ ಕಾರ್ಯಕ್ರಮದಲ್ಲಿ ಕೈಗೊಂಡ ನಿರ್ಣಯವನ್ನು ತಿಳಿಸುವುದಾಗಿ ಸ್ಟಾಲಿನ್ ಹೇಳಿದ್ದಾರೆ. ಈ ಸಭೆಯಲ್ಲಿ ಕರ್ನಾಟಕ, ತೆಲಂಗಾಣ ಸೇರಿದಂತೆ ದೇಶದ ವಿವಿಧ ರಾಜ್ಯದ ಕೆಲವು ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಪ್ರಮುಖ ಗಣ್ಯರು ಭಾಗಿಯಾಗಿದ್ದರು.
ನಮ್ಮ ಚರ್ಚೆಯಿಂದ ಹೊರಹೊಮ್ಮುವ ಧ್ವನಿಗಳು ರಾಜಕೀಯ ಗಡಿಗಳನ್ನು ಮೀರಿ, ನಮ್ಮ ಸಂಸದೀಯ ಪ್ರಜಾಪ್ರಭುತ್ವದಲ್ಲಿ ನ್ಯಾಯಯುತ ಪ್ರಾತಿನಿಧ್ಯ ಬಯಸುವ ಕುರಿತು ಸಿಎಂ ಸ್ಟಾಲಿನ್ ಪತ್ರದಲ್ಲಿ ತಿಳಿಸಿದ್ದಾರೆ.